work ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಪರಿಶೀಲಿಸಿದ ಶಾಸಕ ಮಹೇಶ ಟೆಂಗಿನಕಾಯಿ. 
ಧಾರವಾಡ

ಡಿಸೆಂಬರ್ ಅಂತ್ಯದೊಳಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿ work

ಪ್ರಮುಖ ಮುಖ್ಯಾಂಶಗಳು

  • ಫ್ಲೈ ಓವರ್ ಕಾಮಗಾರಿ ಪರಿಶೀಲಿಸಿದ ಶಾಸಕ ಮಹೇಶ ಟೆಂಗಿನಕಾಯಿ
  • ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲೇಬೇಕು
  • ವೇಳಾಪಟ್ಟಿಯಂತೆ ಕಾಮಗಾರಿ ನಡೆಯಬೇಕು
ದೇಸಾಯಿ ಸರ್ಕಲ್​ನಿಂದ ಹೊಸೂರು ವೃತ್ತದವರೆಗೆ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಗಲ್ಡರ್​ಗಳ ಅಳವಡಿಕೆ, ವಾಹನ ಸಂಚಾರ ಸೇರಿದಂತೆ ಹಲವಾರು ಸಲಹೆಗಳನ್ನು ನೀಡಿದರು.
ನಗರದ ಹೃದಯ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲೇಬೇಕು ಎಂದು ನಿರ್ದೇಶನ ನೀಡಿದರು.
ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಕಳೆದ 15 ದಿನಗಳ ಹಿಂದೆಯೇ ಸಭೆ ನಡೆಸಲಾಗಿದ್ದು, ಕಾಮಗಾರಿಗೆ ವೇಳಾಪಟ್ಟಿ ರೂಪಿಸಲಾಗಿದೆ. ಆ ವೇಳಾಪಟ್ಟಿಯಂತೆ ಕಾಮಗಾರಿ ನಡೆಯಬೇಕು ಎಂದು ಸೂಚನೆ ನೀಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಫ್ಲೈ ಕಾಮಗಾರಿ ಶೇ. 70ರಷ್ಟು ಪೂರ್ಣಗೊಂಡಿದೆ.
ಚನ್ನಮ್ಮ ವೃತ್ತದಲ್ಲಿ 3 ಬಾಕ್ಸ್ ಗರ್ಡರ್ ಅಳವಡಿಸಬೇಕಿದ್ದು, ಒಂದು ಬಾಕ್ಸ್ ಗರ್ಡರ್ ಅಳವಡಿಕೆ ಪ್ರಗತಿಯಲ್ಲಿ ಇದೆ. ಇನ್ನೂ ಎರಡು ಬಾಕ್ಸ್ ಗರ್ಡರ್​ಗಳ ಅಳವಡಿಕೆ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹೊಸೂರು ವೃತ್ತದಲ್ಲಿ 8 ಗರ್ಡರ್​ಗಳನ್ನು ಅಳವಡಿಸುವುದು ಬಾಕಿ ಇದೆ ಎಂದರು.
ಫ್ಲೈ ಓವರ್ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಂತೆ ಅದರ ಕೆಳಗಡೆ ಸಿಸಿ ರಸ್ತೆ ನಿರ್ವಿುಸಲು ಈ ಹಿಂದೆಯೇ ಸೂಚಿಸಲಾಗಿತ್ತು. ಅದರಂತೆ ಐಟಿ ಪಾರ್ಕ್​ನಿಂದ ಹಳೇ ಬಸ್ ನಿಲ್ದಾಣದವರೆಗೆ ಎರಡೂ ಬದಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಚನ್ನಮ್ಮ ವೃತ್ತದಿಂದ ದೇಸಾಯಿ ವೃತ್ತದವರೆಗೂ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಐಟಿ ಪಾರ್ಕ್ ಬಳಿಯ ಬಿಆರ್​ಟಿಎಸ್ ಬಸ್ ನಿಲ್ದಾಣ ತೆರವುಗೊಳಿಸಲಾಗುವುದು. ಹಳೇ ಬಸ್ ನಿಲ್ದಾಣದ ಎದುರು ಧಾರವಾಡದಿಂದ ಬರುವ ಪ್ರಯಾಣಿಕರನ್ನು ಇಳಿಸುವುದಕ್ಕಾಗಿ ಬಿಆರ್​ಟಿಎಸ್ ನಿಲ್ದಾಣದ ಪ್ರಸ್ತಾವನೆ ಇದ್ದು, ಈ ಕುರಿತು ಯೋಚಿಸಲಾಗುವುದು ಎಂದರು.

ಬಸವವನ ವೃತ್ತದಲ್ಲಿ ರಸ್ತೆ ನಿರ್ವಿುಸಲಾಗಿದ್ದು, ಹಳೇ ಬಸ್ ನಿಲ್ದಾಣದಿಂದ ಹೊಸೂರು ರಸ್ತೆಯತ್ತ ತೆರಳುವವರಿಗೆ ರಸ್ತೆ ವಿಶಾಲವಾಗಲಿದೆ ಎಂದು ಹೇಳಿದರು.