festival ಹುಬ್ಬಳ್ಳಿ ಮೂರುಸಾವಿರ ಮಠದ ಕರ್ತೃು ಶ್ರೀ ಜಗದ್ಗುರು ಗುರುಸಿದ್ದೇಶ್ವರರ ಜಾತ್ರಾ ಮಹೋತ್ಸವ ಸೋಮವಾರ ನೆರವೇರಿತು.
- ಮೂರುಸಾವಿರ ಮಠದಲ್ಲಿ ಭಕ್ತರಿಂದ ಗದ್ದುಗೆ ದರ್ಶನ
- ಭಕ್ತರು ಹರ ಹರ ಮಹಾದೇವ.. ಎಂದು ಭಕ್ತಿಯಿಂದ ಘೋಷಣೆ ಕೂಗುತ್ತ ತೇರಿನತ್ತ ಉತ್ತತ್ತಿ, ಬಾಳೆ ಹಣ್ಣು ತೂರಿದರು.
- ರಸ್ತೆ ಇಕ್ಕೆಲಗಳಲ್ಲಿ ರಂಗೋಲಿ ಬಿಡಿಸಲಾಗಿತ್ತು. ತಳಿರು, ತೋರಣಗಳನ್ನು ಕಟ್ಟಲಾಗಿತ್ತು.
ಶ್ರೀ ಜಗದ್ಗುರು ಗುರುಸಿದ್ದೇಶ್ವರರ ಮೂರ್ತಿ ಇದ್ದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಶ್ರೀಮಠದಿಂದ ಬಮ್ಮಾಪುರ ಓಣಿಯ ಓಲೆಮಠಕ್ಕೆ ಹೋಗಿ, ಮರಳಿ ಶ್ರೀಮಠಕ್ಕೆ ಆಗಮಿಸಿದ ನಂತರ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಮೂರುಸಾವಿರ ಮಠದಿಂದ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ನೆರೆದಿದ್ದ ನೂರಾರು ಭಕ್ತರು ಹರ ಹರ ಮಹಾದೇವ.. ಎಂದು ಭಕ್ತಿಯಿಂದ ಘೋಷಣೆ ಕೂಗುತ್ತ ತೇರಿನತ್ತ ಉತ್ತತ್ತಿ, ಬಾಳೆ ಹಣ್ಣು ತೂರಿದರು.
ಮಹಾರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ವಿಕ್ಟೋರಿಯಾ ರಸ್ತೆಯವರೆಗೂ ತೆರಳಿ, ಮರಳಿ ಶ್ರೀಮಠ ತಲುಪಿತು.
ಮಾರ್ಗದುದ್ದಕ್ಕೂ ರಸ್ತೆ ಅಕ್ಕಪಕ್ಕ ನಿಂತಿದ್ದ ಭಕ್ತರು ಘೋಷಣೆಗಳನ್ನು ಕೂಗುತ್ತ ಭಕ್ತಿಯಿಂದ ಕೈ ಮುಗಿಯುತ್ತಿರುವುದು ಕಂಡುಬಂದಿತು. ತೇರು ಚಲಿಸುವ ಮಾರ್ಗದ ರಸ್ತೆ ಇಕ್ಕೆಲಗಳಲ್ಲಿ ರಂಗೋಲಿ ಬಿಡಿಸಲಾಗಿತ್ತು. ತಳಿರು, ತೋರಣಗಳನ್ನು ಕಟ್ಟಲಾಗಿತ್ತು.
ಭಕ್ತರಿಗಾಗಿ ಬೆಣ್ಣೆ ದೋಸೆ, ಚುರುಮರಿ ಸೂಸಲ, ಉಪ್ಪಿಟ್ಟು, ಅನ್ನ, ಸಾರು ಹಾಗೂ ಇನ್ನಿತರ ಖಾದ್ಯಗಳನ್ನು ತಯಾರಿಸಿ, ಬೆಳಗ್ಗಿಯಿಂದಲೇ ಮಹಾಪ್ರಸಾದ ಆರಂಭಿಸಲಾಗಿತ್ತು.
ಹುಬ್ಬಳ್ಳಿ ಅಷ್ಟೇ ಅಲ್ಲದೇ ಸುತ್ತಲಿನ ಹಳ್ಳಿ, ಪಟ್ಟಣಗಳಿಂದಲೂ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ, ಗದ್ದುಗೆಯ ದರ್ಶನ ಪಡೆದು, ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ರಜತ ಸಿಂಹಾಸನದ ಮೇಲೆ ಕುಳಿತು, ಭಕ್ತರನ್ನು ಆಶೀರ್ವದಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಪ್ರಮುಖರಾದ ಸದಾನಂದ ಡಂಗನವರ, ಶರಣಪ್ಪ ಕೊಟಗಿ, ವೀರೇಶ ಸಂಗಳದ, ಸುಭಾಷಸಿಂಗ್ ಜಮಾದಾರ, ರಾಜು ಕೋರ್ಯಾಣಮಠ, ಇನ್ನಿತರರು ಭಾಗವಹಿಸಿದ್ದರು.