ಹುಬ್ಬಳ್ಳಿ: ಮಕ್ಕಳಲ್ಲಿ ಸೃಜನಾತ್ಮಕತೆ ಬೆಳೆಸುವಲ್ಲಿ ಕವಿತೆಯ ಪಾತ್ರ ಬಹಳ ಮುಖ್ಯವಾಗಿದೆ. ಕವಿತೆ ಮನುಷ್ಯನನ್ನು ಸಹೃದಯನನ್ನಾಗಿಸುತ್ತದೆ. ಕವಿತೆ ಕಟ್ಟುವ ಕಲೆ ಜೀವನ ಕಟ್ಟಬಲ್ಲದು ಎಂದು ಯುವ ಕವಿ ರಂಜಾನ್ ಕಿಲ್ಲೇದಾರ ಅಭಿಪ್ರಾಯಪಟ್ಟರು.
ಕಿರೇಸೂರ ಸರ್ಕಾರಿ ಪ್ರೌಢಶಾಲೆಯ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಮೊದಲ ಸಮುದಾಯದತ್ತ ಕಾರ್ಯಕ್ರಮದಲ್ಲಿ ಅವರು ಮಾರ್ಗದರ್ಶಕರಾಗಿ ಪಾಲ್ಗೊಂಡು ಮಾತನಾಡಿದರು.
ಕವಿತೆ ಕಟ್ಟುವ ಸಂಸ್ಕಾರವನ್ನು ಶಾಲೆಗಳಲ್ಲಿ ಬೆಳೆಸಬೇಕು. ಮಕ್ಕಳಿಗೆ ಕನ್ನಡ ಕವಿತೆಗಳ ಬಗ್ಗೆ ಆಸಕ್ತಿ, ಕುತೂಹಲ ಮೂಡಿಸುವ ವಾತಾವರಣ ನಿರ್ಮಿಸಬೇಕು. ಆದರೆ, ಇಂದು ಮೊಬೈಲ್ ಯುಗ ಮಕ್ಕಳ ಸೃಜನಾತ್ಮಕತೆ ದೂರ ತಳ್ಳುತ್ತಿದೆ. ಮಕ್ಕಳು ಸ್ವಂತವಾಗಿ ರಚಿಸುವ, ಸೃಜಿಸುವ, ಸೃಷ್ಟಿಸುವ ಕೌಶಲಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಮುನ್ಸೂಚನೆ ಎಂದು ಕಳವಳ ವ್ಯಕ್ತಪಡಿಸಿದರು.
ಬಾಲಕವಿಗಳಾದ ಸುಪ್ರೀತಾ ಈಟಿ, ಶಂಕ್ರವ್ವ ಚನ್ನಪ್ಪಗೌಡ್ರ, ಕಾವೇರಿ ನಾಗನೂರ, ಶ್ವೇತಾ ಮಲ್ಲೂರ, ಸಹನಾ ಮೇಟಿ, ವೆಷ್ಣವಿ ಸಾವಕ್ಕನವರ, ಕಾವ್ಯ ಬೂದಣ್ಣವರ, ವರುಣ ಬಡಿಗೇರ, ಯಶೋಧಾ ಧರೆಪ್ಪನವರ, ಐಶ್ವರ್ಯ ಗುಡಿಸಲಮನಿ, ನಿವೇದಿತಾ ಹಿರೇಮಠ, ದಾನೇಶ್ವರಿ ಬಳಗಲಿ, ಪ್ರೀತಂ ರೇವಣ್ಣವರ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಶಿಕ್ಷಕಿ ಜಯಶ್ರೀ ಎಂ., ಸುಲೋಚನಾ ಬೆಳಗಾವಿ, ಮಂಗಳಾ ಕಮ್ಮಾರ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಸುಮನ ತೇಲಂಗ ಮಾತನಾಡಿದರು. ಅರಳೀಕಟ್ಟೆ ಸಂಚಾಲಕ ಡಾ. ಲಿಂಗರಾಜ ರಾಮಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿ ಚಾಕಲಬ್ಬಿ ಕಾರ್ಯಕ್ರಮ ನಿರ್ವಹಿಸಿದರು.