teachers demand ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಮಾತನಾಡಿದರು. 
ಧಾರವಾಡ

teachers demand ಕೇಂದ್ರ ಸರ್ಕಾರ ಶಿಕ್ಷಕರ ಹಿತ ಕಾಯಲಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಆಗ್ರಹ
  • ಜೂನ್​ 18ರಂದು ದೇಶದಾದ್ಯಂತ ಜಿಲ್ಲಾಧಿಕಾರಿಗೆ ಮನವಿ
ಹುಬ್ಬಳ್ಳಿ: teachers demand ದಶಕದ ಹಿಂದೆ ನೇಮಕವಾದ ಶಿಕ್ಷಕರಿಗೂ ಟಿಇಟಿ ಕಡ್ಡಾಯ ಮಾಡಿರುವುದರಿಂದ ಲಕ್ಷಾಂತರ ಶಿಕ್ಷಕರಿಗೆ ಸೇವಾ ಅಭದ್ರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ಟ್​ ಇತ್ತೀಚೆಗೆ ನೀಡಿರುವ ಆದೇಶದಿಂದ ದೇಶದ ಸುಮಾರು 17 ಲಕ್ಷ ಶಿಕ್ಷಕರು ಆತಂಕಗೊಂಡಿದ್ದಾರೆ. 2010ಕ್ಕೆ ಮುಂಚೆ ನೇಮಕವಾದ ಶಿಕ್ಷಕರಿಗೆ ಟಿಇಟಿಯಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್​ನಲ್ಲಿ ಹಿಂದಿನ ಆದೇಶವನ್ನೇ ಎತ್ತಿ ಹಿಡಿಯಲಾಗಿದೆ ಎಂದರು.
31 ಆಗಸ್ಟ್​ 2028ರೊಳಗೆ ಎಲ್ಲ ಶಿಕ್ಷಕರು ಕಡ್ಡಾಯವಾಗಿ ಟಿಇಟಿ ಉತ್ತೀರ್ಣರಾಗಲೇಬೇಕು ಎಂದು ಆದೇಶ ನೀಡಲಾಗಿದೆ. ದೇಶದಲ್ಲಿ 17 ಲಕ್ಷ ಶಿಕ್ಷಕರಲ್ಲಿ 55 ವರ್ಷಗಳಾದವರಿಗೆ ವಿನಾಯಿತಿ ನೀಡಲಾಗಿದ್ದು, ಇದರಿಂದ ದೇಶದಲ್ಲಿ 3 ಲಕ್ಷ ಹಾಗೂ ರಾಜ್ಯದಲ್ಲಿ 17 ಸಾವಿರ ಶಿಕ್ಷಕರು ವಿನಾಯಿತಿಗೆ ಅರ್ಹರಾಗಲಿದ್ದಾರೆ.
ಆದರೆ, ಇನ್ನುಳಿದ 14 ಲಕ್ಷಕ್ಕೂ ಅಧಿಕ ಶಿಕ್ಷಕರು ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿಸಿ ಸಮಸ್ಯೆ ಪರಿಹರಿಸುವ ಮೂಲಕ ಶಿಕ್ಷಕರ ನೆರವಿಗೆ ಬರಬೇಕೆಂದು ಅವರು ಒತ್ತಾಯಿಸಿದರು.
ಜೂನ್​ 18ರಂದು ದೇಶದಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗೆ ಹಾಗೂ ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಧಾರವಾಡ ಜಿಲ್ಲಾಧಿಕಾರಿಗೆ ಅಂದು ಸಂಜೆ 4ಕ್ಕೆ ಮನವಿ ಸಲ್ಲಿಸಲಾಗುತ್ತದೆ. ಶಿಕ್ಷಕರು ಭಾಗಿಯಾಗಲಿದ್ದಾರೆ ಎಂದರು.