ಹುಬ್ಬಳ್ಳಿಯ ವಿಹಾನ್ ಹಾರ್ಟ್ ಆಂಡ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಿದ ಸೈನರ್ಜಿ ವಿಷನ್ ಇಮೇಜಿಂಗ್ ಅನ್ನು ಡಾ. ವಿ.ಎಸ್.ವಿ. ಪ್ರಸಾದ ಲೋಕಾರ್ಪಣೆಗೊಳಿಸಿದರು. 
ಧಾರವಾಡ

ವಿಹಾನ ಆಸ್ಪತ್ರೆಯಲ್ಲಿ ಸೈನರ್ಜಿ ವಿಷನ್ ಇಮೇಜಿಂಗ್ ವ್ಯವಸ್ಥೆ

ಕನಿಷ್ಠ ಛೇದನದ ಶಸ್ತ್ರಚಿಕಿತ್ಸೆಗೆ ಅನುಕೂಲ | ಲೋಕಾರ್ಪಣೆಗೊಳಿಸಿದ ಡಾ. ವಿ.ಎಸ್.ವಿ. ಪ್ರಸಾದ

ಹುಬ್ಬಳ್ಳಿ : ಕನಿಷ್ಠ ಛೇದನದ ಶಸ್ತ್ರಚಿಕಿತ್ಸೆಗಾಗಿ ಹುಬ್ಬಳ್ಳಿಯ ವಿಹಾನ್ ಹಾರ್ಟ್ ಆಂಡ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಪಾನೋ ಸ್ಕೋಪ್ ಮತ್ತು ನ್ಯಾನೋ ನೀಡಲ್ ಸ್ಕೋಪ್ ತಂತ್ರಜ್ಞಾನ ಹೊಂದಿರುವ ಆಥ್ರೆಕ್ಸ್ ಸೈನರ್ಜಿ ವಿಷನ್ ಇಮೇಜಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ಆರ್ಥೊಪೆಡಿಕ್ ಸರ್ಜನ್ ಡಾ. ಹರಿಕೃಷ್ಣ ಮಠ, ಸೈನರ್ಜಿ ಉಪಕರಣ ಅಳವಡಿಸಿಕೊಂಡ ಉತ್ತರ ಕರ್ನಾಟಕದ ಮೊದಲ ಆಸ್ಪತ್ರೆ ಇದಾಗಿದೆ ಎಂದರು.

ಸಾಂಪ್ರದಾಯಿಕ ಆಥೋಸ್ಕೋಪಿಯಲ್ಲಿ ಸಾಮಾನ್ಯವಾಗಿ ಕೀಲುಗಳ ಒಳಭಾಗವನ್ನು ಒಂದೇ ಕ್ಯಾಮೆರಾ ದೃಷ್ಟಿಯಿಂದ ವೀಕ್ಷಿಸಲಾಗುತ್ತದೆ ಎಂದು ಹೇಳಿದರು.

ಹೈ ಡೆಫಿನಿಷನ್ ಮತ್ತು 4ಎ ಇಮೇಜಿಂಗ್​ನ ಪ್ರಗತಿಯಿಂದ ದೃಶ್ಯೀಕರಣ ಬಹಳಷ್ಟು ಸುಧಾರಿಸಿದ್ದರೂ, ಮುಂದಿನ ಹಂತವು ಕೇವಲ ಹೆಚ್ಚಿನ ರೆಸಲ್ಯೂಶನ್ ಪಡೆಯುವುದಲ್ಲ. ಚಿಕಿತ್ಸೆಯ ಸಮಯದಲ್ಲಿ ಶಸ್ತ್ರಚಿಕಿತ್ಸಕರು ದೇಹದ ಒಳರಚನೆಯನ್ನು ನೋಡುವ ವಿಧಾನವನ್ನೇ ಬದಲಾಗಿಸುವುದಾಗಿದೆ ಎಂದು ತಿಳಿಸಿದರು.

ಸುಮಾರು 1.9 ಮಿ.ಮೀ. ವ್ಯಾಸ ಹೊಂದಿರುವ ನ್ಯಾನೋನೀಡಲ್ ಸ್ಕೋಪ್ ಸಾಮಾನ್ಯವಾಗಿ ಬಳಸುವ ಆಥ್ರೋಸ್ಕೋಪಿಕ್ ಸ್ಕೋಪ್​ಗಳಿಗಿಂತ ಬಹಳ ಚಿಕ್ಕದಾಗಿದೆ. ಶಸ್ತ್ರಚಿಕಿತ್ಸಕರು ನ್ಯಾನೋ ಮತ್ತು 4ಕೆ ಚಿತ್ರಗಳನ್ನು ಒಂದೇ ಸಮಯದಲ್ಲಿ ನೋಡಬಹುದು.

ಶಸ್ತ್ರಚಿಕಿತ್ಸೆಯ ದೃಶ್ಯಗಳನ್ನು ಸಹ ಚಿತ್ರೀಕರಿಸಬಹುದಾಗಿದ್ದು, ನಂತರ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ವಿಡಿಯೋ ಒದಗಿಸಬಹುದಾಗಿದೆ ಎಂದರು.

ಈ ಸೈನರ್ಜಿ ಉಪಕರಣ ಬಳಕೆಯಿಂದ ರೋಗಿಗಳು ಎಂಆರ್​ಐ ಸ್ಕ್ಯಾನ್ ಮಾಡಿಸುವುದು ತಪ್ಪುತ್ತದೆ. ಇದರಿಂದ ರೋಗಿಗಳ ಸಂಬಂಧಿಕರಿಗೂ 5 ರಿಂದ 6 ಸಾವಿರ ರೂ. ಉಳಿತಾಯವಾಗುತ್ತದೆ. ಈ ಉಪಕರಣದ ಮೂಲಕ ನಡೆಸುವ ಶಸ್ತ್ರಚಿಕಿತ್ಸೆಗೆ ಅರಿವಳಿಕೆಯ ಅಗತ್ಯವೂ ಇಲ್ಲ ಎಂದು ಹೇಳಿದರು.

ಭುಜ, ಮೊಣಕಾಲು, ಸೊಂಟ ಸೇರಿ ಇನ್ನಿತರ ಶಸ್ತ್ರಚಿಕಿತ್ಸೆಗಳಲ್ಲಿ ಇದನ್ನು ಬಳಸಬಹುದಾಗಿದೆ. ಕೀಲುಗಳು, ಲಿಗಮೆಂಟ್​ಗಳು, ಕ್ರೀಡಾ ಗಾಯಗಳು, ಸಂಕೀರ್ಣ ಸ್ನಾಯು ಅಸ್ಥಿ ಸಂಬಂಧಿಸಿದ ಸಮಸ್ಯೆಗಳಿಗೆ ಸಮಗ್ರ ಆರೈಕೆಯನ್ನು ಈ ಆಸ್ಪತ್ರೆಯಲ್ಲಿ ಒದಗಿಸಲಾಗುತ್ತದೆ ಎಂದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಅವರು ಆಥ್ರೆಕ್ಸ್ ಸೈನರ್ಜಿ ವಿಷನ್ ಇಮೇಜಿಂಗ್ ಉಪಕರಣವನ್ನು ಲೋಕಾರ್ಪಣೆಗೊಳಿಸಿದರು.

ವಿಹಾನ್ ಹಾರ್ಟ್ ಕೇರ್ ಪ್ರೖೆ.ಲಿ. ಅಧ್ಯಕ್ಷ ಡಾ. ವಿಜಯಕೃಷ್ಣ ಕೊಳೂರು, ಅವಾನ ಕಂಪನಿ ಅಧಿಕಾರಿ ವಿನಯ ಆರ್.ಎ., ಡಾ. ಮುರಳಿಧರ ಸುದ್ದಿಗೋಷ್ಠಿಯಲ್ಲಿದ್ದರು.