ಧಾರವಾಡದ ಸುಸಜ್ಜಿತ ಈಜುಕೊಳ- ಕ್ರೀಡಾ ಸಂಕೀರ್ಣ.
ಮಂಜುನಾಥ ಎಸ್. ಅಂಗಡಿ ಧಾರವಾಡ
ವಿದ್ಯಾಕಾಶಿ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ಮತ್ತು ಈಜುಕೊಳ ನಿರ್ಮಾಣ ದಶಕದ ಬೇಡಿಕೆಯಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮುತುವರ್ಜಿಯಿಂದ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣಗೊಂಡಿದೆ. ಮಾರ್ಚ್ನಲ್ಲೇ ಲೋಕಾರ್ಪಣೆಗೊಂಡಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಈವರೆಗೂ ಬಾಗಿಲು ತೆರೆದಿಲ್ಲ.
ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಿ.ಸಿ. ಕಾಂಪೌಂಡ್ ಪಕ್ಕ ಈಜುಕೊಳ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪ್ರಸ್ತಾವನೆ ಮೇರೆಗೆ ಎನ್ಎಂಡಿಸಿ ಮತ್ತು ಒಎನ್ಜಿಸಿ ಕಂಪನಿಗಳ ಸಿಎಸ್ಆರ್ ಅಡಿ ಸುಮಾರು 52 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕ್ರೀಡಾ ಸಂಕೀರ್ಣ ನಿರ್ಮಾಣಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳೊಂದಿಗೆ ಇದು ತಲೆಎತ್ತಿದೆ.
ಸುಮಾರು 46 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡ 2 ಅಂತಸ್ತಿನ ಕ್ರೀಡಾ ಸಂಕೀರ್ಣದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗೆ ಅವಕಾಶವಿದೆ. ಕಬಡ್ಡಿ, ಕುಸ್ತಿ, ಟೆಕ್ವಾಂಡೋ, ಕರಾಟೆ, ಜಿಮ್ ಸೇರಿ ಹಲವು ಕ್ರೀಡಾ ಅಂಕಣಗಳಿವೆ. 2 ಟೇಬಲ್ ಟೆನ್ನಿಸ್ ಅಂಕಣಗಳಿವೆ. 2ನೇ ಮಹಡಿಯಲ್ಲಿ 4 ಬ್ಯಾಡ್ಮಿಂಟನ್ ಕೋರ್ಟ್ಗಳಿವೆ. ಎರಡೂ ಮಹಡಿಗಳಲ್ಲಿ ತಲಾ 50 ಜನರಿಗೆ ಪಂದ್ಯ ನೋಡಲು ವೀಕ್ಷಕರ ಗ್ಯಾಲರಿಗಳಿವೆ. ಎರಡೂ ಮಹಡಿಗಳಲ್ಲಿ ಕ್ರೀಡಾಪಟುಗಳ ವಿಶ್ರಾಂತಿ ಕೊಠಡಿ, ರೆಸ್ಟ್ರೂಂ ವ್ಯವಸ್ಥೆ ಇದೆ. ಸುಮಾರು 40 ಟೇಬಲ್ಗಳ ಕ್ಯಾಂಟಿನ್ ನಿರ್ಮಾಣಕ್ಕೆ ಸ್ಥಳ ಮೀಸಲಿಡಲಾಗಿದೆ. ಈಜುಕೊಳದ ಪಕ್ಕ 10 ಮೀ. ಶೂಟಿಂಗ್ ಅಂಕಣವಿದೆ.
ಅಂತಾರಾಷ್ಟ್ರೀಯ ವಿನ್ಯಾಸದ 50 ಮೀಟರ್ ಉದ್ದದ ಈಜುಕೊಳದದಲ್ಲಿ 5 ಡೈವಿಂಗ್ ಬೋರ್ಡ್ಗಳಿವೆ. ಅನುಭವಿ ತರಬೇತುದಾರರಿಂದ ಈಜುಪಟುಗಳಿಗೆ ತರಬೇತಿ ಕೊಡಿಸುವ ಉದ್ದೇಶ ಹೊಂದಲಾಗಿದೆ. ಈ ಭಾಗದ ಈಜುಪಟುಗಳು ಇಲ್ಲಿ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರವಾಡಕ್ಕೆ ಕೀತಿರ್ ತರಲು ಇದು ವೇದಿಕೆಯಾಗಲಿದೆ.
ಉದ್ಘಾಟನೆಯಾಗಿ ಮೂರುವರೆ ತಿಂಗಳಾದರೂ ಅಂತಾರಾಷ್ಟ್ರೀಯ ಈಜುಕೊಳವನ್ನು ಆರಂಭಿಸಿ ಅದರ ನಿರ್ವಹಣೆಯನ್ನು ಸ್ಪೋರ್ಟ್ಸ್ ಅಕಾಡೆಮಿಗಳಿಗೆ ನೀಡುವ ಇಚ್ಚಾಶಕ್ತಿಯನ್ನು ಜಿಲ್ಲಾಡಳಿತ ತೋರಲಿಲ್ಲ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ ನಿರ್ವಹಣೆ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲು 3 ತಿಂಗಳ ಕಾಲಹರಣ ಮಾಡಲಾಗಿದೆ. ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ ಇತ್ತೀಚೆಗೆ ನಿರ್ವಹಣೆಗಾಗಿ ಸ್ಪೋರ್ಟ್ಸ್ ಅಕಾಡೆಮಿ, ಅಸೋಸಿಯೇಷನ್ಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದು ತಿಂಗಳಾದರೂ ಬೇಕು.
"
ಧಾರವಾಡದ ಈಜುಕೊಳ- ಕ್ರೀಡಾ ಸಂಕೀರ್ಣದಲ್ಲಿ ಕೆಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಕ್ರೀಡಾ ಚಟುವಟಿಕೆಗಳ ಆರಂಭ ವಿಳಂಬವಾಗಿದೆ. ಕ್ರೀಡಾ ಸಂಕೀರ್ಣದ ನಿರ್ವಹಣೆಗಾಗಿ ಆಸಕ್ತ ಸ್ಪೋರ್ಟ್ಸ್ ಅಕಾಡೆಮಿ- ಅಸೋಸಿಯೇಷನ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಮುಗಿದು ಕ್ರೀಡಾ ಚಟುವಟಿಕೆಗೆ ಮುಕ್ತವಾಗಲಿದೆ.
— ಸದಾನಂದ ಅಮರಾಪುರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ