swabhiman divas ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಸ್ವಾಭಿಮಾನ ದಿನ ಆಚರಣೆಯಲ್ಲಿ ಅಂಗವಿಕಲರಿಗೆ ಕೃತಕ ಕಾಲು ವಿತರಿಸಲಾಯಿತು. ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಚಿವ ಎಚ್​.ಸಿ. ಮಹದೇವಪ್ಪ, ಶಾಸಕರಾದ ಪ್ರಸಾದ ಅಬ್ಬಯ್ಯ, ಎಫ್.ಎಚ್​. ಜಕ್ಕಪ್ಪನವರ, ಫೆಡರೇಶನ್​ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ರಾಜಶೇಖರ ಮೆಣಸಿನಕಾಯಿ ಇತರರು ಇದ್ದರು. 
ಧಾರವಾಡ

swabhiman divas ಸ್ವಾಭಿಮಾನ ದಿನದ ಅರ್ಥಪೂರ್ಣ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಅಂಗವಿಕಲರಿಗೆ ಕೃತಕ ಕಾಲು ವಿತರಣೆ
  • ಗೃಹ ಸಚಿವ ಡಾ. ಜಿ. ಪರಮೇಶ್ವರ ಭಾಗಿ
ಹುಬ್ಬಳ್ಳಿ: swabhiman divas ಜೈನ್​ ಧರ್ಮವು ಹೇಳಿರುವಂತೆ ಬಾಳು, ಬಾಳಲು ಬಿಡು ಹಾಗೂ ಅಹಿಂಸಾ ಪರಮೋ ಧರ್ಮ ತತ್ವಗಳು ಸಮಾಜದಲ್ಲಿ ಶಾಂತಿ ಸಹಬಾಳ್ವೆಗೆ ಬಹಳ ಮಹತ್ವದ್ದಾಗಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಇಲ್ಲಿಯ ಆಲ್​ ಇಂಡಿಯಾ ಜೈನ್​ ಯೂಥ್​ ಫೆಡರೇಷನ್​ ವತಿಯಿಂದ ಮಹಾವೀರ ಲಿಂಬ್​ ಸೆಂಟರ್​ನ 30ನೇ ಸ್ಥಾಪನಾ ವರ್ಷದ ಅಂಗವಾಗಿ ನಗರದ ಕೇಶ್ವಾಪುರದ ಸಂಸ್ಕಾರ ಇಂಗ್ಲಿಷ್​ ಮೀಡಿಯಂ ಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಭಿಮಾನ ದಿನಾಚರಣೆಯಲ್ಲಿ ಅಂಗವಿಕಲರಿಗೆ ಕೃತಕ ಕಾಲು ವಿತರಿಸಿ ಅವರು ಮಾತನಾಡಿದರು.
ಇದುವರೆಗೂ ಲಿಂಬ್​ ಸೆಂಟರ್​ ಕೈಗೊಂಡ ಸಾಮಾಜಿಕ ಸೇವಾ ಕಾರ್ಯ ಸ್ಮರಿಸಿದ ಅವರು, ಮಾನವೀಯ ನೆಲೆಯಲ್ಲಿ ಮಾಡುತ್ತಿರುವ ಇಂತಹ ಕೆಲಸಗಳು ನಿರಂತರ ನಡೆಯಬೇಕು ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಆಚಾರ್ಯ ವಿಮಲಸಾಗರ ಸೂರಿಶ್ವರಜಿ ಮಹಾರಾಜ್​ ಅವರು, ಮಾನವನಿಗೆ ನಿಜವಾದ ಸಂತೋಷ ದಾನದಿಂದಲೇ ಸಿಗುತ್ತದೆ. ದಯೆ, ಕರುಣೆ, ಭಕ್ತಿ ಮತ್ತು ಪರೋಪಕಾರದ ಗುಣಗಳಿಂದ ದಾನಭಾವನೆ ಮೂಡುತ್ತದೆ ಎಂದು ಹೇಳಿದರು.
ಪದ್ಮವಿಮಲಸಾಗರಜಿ ಮಹಾರಾಜ್​ ಸಾನ್ನಿಧ್ಯ ವಹಿಸಿದ್ದರು. ಫೆಡರೇಷನ್​ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ಮಹಾವೀರ ಲಿಂಬ್​ ಸೆಂಟರ್​ ಇತ್ತೀಚಿನ ವರ್ಷಗಳಲ್ಲಿ 350ಕ್ಕೂ ಹೆಚ್ಚು ಶಿಬಿರಗಳ ಮೂಲಕ 55 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಕೃತಕ ಅಂಗಗಳನ್ನು ವಿತರಿಸಿ, ಅವರಿಗೆ ಆತ್ಮನಿರ್ಭರ ಜೀವನಕ್ಕೆ ಪ್ರೇರಣೆ ನೀಡಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್​.ಸಿ. ಮಹಾದೇವಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್​ ಸದಸ್ಯ ಎಫ್​.ಎಚ್​. ಜಕ್ಕಪ್ಪನವರ ಅತಿಥಿಗಳಾಗಿ ಪಾಲ್ಗೊಂಡಿದ್ದರು.