Vascular ಹುಬ್ಬಳ್ಳಿಯ ಸುಖದಾ ವ್ಯಾಸ್ಕುಲರ್ ಇನ್ಸ್ಟಿಟ್ಯೂಟ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಿಇಒ ಡಾ. ಚೇತನ ಹೊಸಕಟ್ಟಿ ಮಾಹಿತಿ ನೀಡಿದರು. ಡಾ. ರಶ್ಮಿ ಹೊಸಕಟ್ಟಿ, ಡಾ. ಸೀಮಾ ಭೈರಿ ಇದ್ದರು.
- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
- ಸುಸಜ್ಜಿತ ಹಾಗೂ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ
ಇಲ್ಲಿಯ ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 4ರಂದು ಬೆಳಗ್ಗೆ ಆಸ್ಪತ್ರೆಯ ಉದ್ಘಾಟನೆ ನಡೆಯಲಿದೆ. ನಗರದ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.
ಬೆಂಗಳೂರು ಬಿಟ್ಟರೆ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಸುಸಜ್ಜಿತ ಹಾಗೂ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಇರುವ ಆಸ್ಪತ್ರೆ ನಿರ್ಮಿಸಲಾಗಿದೆ. ರಕ್ತನಾಳಗಳ ಚಿಕಿತ್ಸೆ ವಿಭಾಗದಲ್ಲಿ ಈ ಭಾಗದ ಜನರು ಸುಸಜ್ಜಿತ ಆಸ್ಪತ್ರೆ ಹಾಗೂ ತಜ್ಞರ ಕೊರತೆ ಎದುರಿಸುತ್ತಿದ್ದರು. ಚಿಕಿತ್ಸೆಗೆ ಬೆಂಗಳೂರು ಇಲ್ಲವೇ ಬೇರೆ ಮಹಾನಗರಗಳಿಗೆ ಹೋಗಬೇಕಾಗಿತ್ತು. ಸುಖದಾ ಹಾಸ್ಪಿಟಲ್ 50 ಬೆಡ್ ಗಳನ್ನು ಹೊಂದಿದ್ದು, ಇಲ್ಲಿನ ಜನರಿಗೆ ಸೇವೆ ನೀಡಲಿದೆ ಎಂದರು.
ದೇಶಾದ್ಯಂತ ರಕ್ತನಾಳ, ಮಧುಮೇಹ ರೋಗಿಗಳು ಎದುರಾಗುವ ವಿವಿಧ ರೀತಿಯ ಕಾಯಿಲೆಗಳಿಗೆ ಬಹಳಷ್ಟು ಜನರು ತುತ್ತಾಗುತ್ತಿದ್ದಾರೆ. ಅದರಲ್ಲೂ ಮಧುಮೇಹ ಪಾದಗಾಯಗಳು, ದೀರ್ಘಕಾಲದ ಕಾಲು ನೋವು ಹಾಗೂ ಗುಣಮುಖವಾಗದ ಗಾಯಗಳಿಂದ ಹಲವರು ಬಳಲುತ್ತಿದ್ದಾರೆ.
ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಸೋಂಕು, ಅಂಗವೈಕಲ್ಯ, ದೀರ್ಘಕಾಲದ ಆಸ್ಪತ್ರೆ ವಾಸ ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಕಾಲು ಕತ್ತರಿಸುವ ಅನಿವಾರ್ಯತೆ ಎದುರಾಗಬಹುದು. ಈ ಎಲ್ಲ ಅನಾನುಕೂಲಗಳನ್ನು ತಪ್ಪಿಸಲು ಆಸ್ಪತ್ರೆ ಪ್ರಾರಂಭಿಸಲಾಗಿದೆ ಎಂದರು.
ಸುಖದಾ ಹಾಸ್ಪಿಟಲ್ನಲ್ಲಿ ರಕ್ತನಾಳ, ಮಧುಮೇಹ ರೋಗ ಪತ್ತೆ, ತಪಾಸಣೆ, ಚಿಕಿತ್ಸೆ ಮುಂತಾದ ಸೇವೆಗಳನ್ನು ನೀಡಲಾಗುವುದು. ಬಡವರಿಗೆ ಬಿಪಿಎಲ್ ಕಾರ್ಡ್ ಇತರೆ ಸ್ಕೀಂಗಳ ಅಡಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಕೆಲವು ತಿಂಗಳಗಳ ನಂತರ ಪ್ರಯತ್ನ ಮಾಡಲಾಗುವುದು ಎಂದರು.