Sugarcane ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಹುಬ್ಬಳ್ಳಿಯಲ್ಲಿ ಮನವಿ ಸಲ್ಲಿಸಲಾಯಿತು.
- 12 ತಿಂಗಳ ವಾಯಿದೆ ಒಳಗಾಗಿ ಕಬ್ಬು ಕಟಾವು ಮಾಡಬೇಕು.
- ಹೆಚ್ಚು ಕಾರ್ಖಾನೆಗಳು ಆರಂಭಗೊಂಡಲ್ಲಿ ರೈತರಿಗೆ ಸರ್ಧಾತ್ಮಕ ಬೆಲೆ ಸಿಗುತ್ತದೆ.
- ರೈತರಿಗೆ ಮೋಸ ಮಾಡುವ ಸಕ್ಕರೆ ಕಾರ್ಖಾನೆ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು.
ಹುಬ್ಬಳ್ಳಿ :
ಕಬ್ಬಿನ ಎಫ್ಆರ್ಪಿ ದರ ನಿಗದಿ ಮಾಡುವಾಗ ಕಬ್ಬಿನ ಸಿಪ್ಪೆ ಮತ್ತು ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಮೊಲಸಿಸ್, ಮದ್ಯಸಾರ, ಯಥಿನಾಲ್ ಹಾಗು ಬಯೋ ಕಾಂಪೋಸ್ಟ್ ಗೊಬ್ಬರಗಳ ಲಾಭವನ್ನು ಲೆಕ್ಕ ಹಾಕಿ ಕಬ್ಬಿನ ಎಫ್.ಆರ್.ಪಿ ವರ ನಿಗಧಿ ಮಾಡಬೇಕು, ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣವನ್ನು ಕನಿಷ್ಠ ಶೇ. 9ರಷ್ಟು ನಿಗದಿ ಮಾಡಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಾಗ, ವಿದ್ಯುತ್ ಶಾರ್ಟ್ಸರ್ಕಿಟ್ನಿಂದ ಬೆಂಕಿ ಹತ್ತಿಕೊಂಡಾಗ ಇಂತಹ ಕಬ್ಬನ್ನು ಕಾರ್ಖಾನೆಗೆ ಸರಬರಾಜು ಮಾಡಿದಾಗ ಕಬ್ಬು ನುರಿಸಿದ ಸಕ್ಕರೆ ಕಾರ್ಖಾನೆ ರೈತರಿಗೆ ಎಫ್ಆರ್ಪಿ ದರದಲ್ಲಿ 25ರಷ್ಟು ಹಣ ಕಡಿತ ಮಾಡುವ ಪದ್ಧತಿ ತಪ್ಪಿಸಬೇಕು ಎಂದು ಮನವಿ ಮಾಡಿದರು.
12 ತಿಂಗಳ ವಾಯಿದೆ ಒಳಗಾಗಿ ಕಬ್ಬು ಕಟಾವು ಮಾಡಬೇಕು. ಅನೇಕ ಸಂದರ್ಭದಲ್ಲಿ 14-15 ತಿಂಗಳು ವಿಳಂಬವಾಗಿ ಕಟಾವ್ ಮಾಡಿದಾಗ, ರೈತನ ಬ್ಯಾಂಕಿನ ಕಬ್ಬಿನ ಸಾಲದ ಹೆಚ್ಚುವರಿ ಬಡ್ಡಿಯನ್ನು ಕಾರ್ಖಾನೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ನೂತನ ಕಾರ್ಖಾನೆಗಳ ಆರಂಭಕ್ಕೆ 25 ಕಿ.ಮೀ. ವ್ಯಾಪ್ತಿಯ ನಿರ್ಧಾರ ಕೈಬಿಡಬೇಕು. ಹೆಚ್ಚು ಕಾರ್ಖಾನೆಗಳು ಆರಂಭಗೊಂಡಲ್ಲಿ ರೈತರಿಗೆ ಸರ್ಧಾತ್ಮಕ ಬೆಲೆ ಸಿಗುತ್ತದೆ. ರಂಗರಾಜನ್ ವರದಿಯಲ್ಲಿಯು ಇದೆ ಪ್ರಸ್ತಾವ ಮಾಡಲಾಗಿದೆ.
ಕಬ್ಬು ಬೆಳೆಗಾರ ರೈತರಿಗೆ ಕಾರ್ಖಾನೆ ವ್ಯಾಪ್ತಿಗೆ ಮೀಸಲು ಪ್ರದೇಶ ನಿರ್ಧಾರ ಮಾಡಬಾರದು ಹಾಗೂ ರೈತನಿಗೆ ಮುಕ್ತ ಅವಕಾಶಗಳಿರಬೇಕು ಎಂದು ಮನವಿ ಮಾಡಿದರು.
ಕಬ್ಬಿನ ಕಟಾವು ಯಂತ್ರದ ಮೂಲಕ ಮಾಡುವ ಕಟಾವಿನ ವೇಸ್ಟೇಜ್ ಶೇ. 2 ಕಿಂತ ಹೆಚ್ಚು ಕಡಿತ ಮಾಡಬಾರದು ಎನ್ನುವ ನಿಯಮ ಜಾರಿಗೆ ಬರಬೇಕು. ಸಧ್ಯ ಶೇ. 78 ರಷ್ಟು ಕಡಿತ ಮಾಡಿ ಮೋಸ ಮಾಡುತ್ತಿದ್ದಾರೆ, ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸಿ, ರೈತರಿಗೆ ಮೋಸ ಮಾಡುವ ಸಕ್ಕರೆ ಕಾರ್ಖಾನೆ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಕಬ್ಬಿನ ತೂಕದಲ್ಲಿ ರೈತರನ್ನು ವಂಚಿಸುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಪ್ರಲ್ಹಾದ ಜೋಶಿ, ಈ ಕುರಿತು ಸಂಬಂಧಿಸಿದ ಸಚಿವರೊಂದಿಗೆ ರ್ಚಚಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಒಕ್ಕೂಟದ ಪ್ರಮುಖರಾದ ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ವಸಂತ ಡಾಕಪ್ಪನವರ, ಬಸನಗೌಡ ಸಿದ್ದನಗೌಡ್ರ, ನಿಂಗಪ್ಪ ತಡಸ ಹಾಗೂ ಇತರರು ಹಾಜರಿದ್ದರು.