ಧಾರವಾಡ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ರಾಜಿ ಸಂಧಾನ ಪ್ರಕ್ರಿಯೆ. 
ಧಾರವಾಡ

ಕೌಟುಂಬಿಕ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಧಾರವಾಡ: ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಸುಮಾರು 55 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡವು. ಪ್ರಮುಖವಾಗಿ 15 ದಂಪತಿ ಭಿನ್ನಾಭಿಪ್ರಾಯ ಬದಿಗೊತ್ತಿ ಮತ್ತೆ ಒಂದಾಗಿ ಜೀವನ ನಡೆಸಲು ನಿರ್ಧರಿಸಿದರು. ಪರಸ್ಪರ ಹೊಂದಾಣಿಕೆಯಿಂದ ದಾಂಪತ್ಯ ಜೀವನ ಮುಂದುವರಿಸಲು ಒಪ್ಪಿ ಸಂತೋಷದಿಂದ ಮನೆಗಳಿಗೆ ತೆರಳಿದರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್​.ವಿ. ವಿಜಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ನಾಗರಾಜಪ್ಪ. ಎ.ಕೆ. ಮಾತನಾಡಿ, ರಾಜಿ ಪ್ರಕ್ರಿಯೆಯಲ್ಲಿ 15 ಜೋಡಿ ಒಂದಾಗಲು ಒಪ್ಪಿ ಜೀವನ ನಡೆಸಲು ನಿರ್ಧರಿಸಿದರು. ಇವುಗಳಲ್ಲಿ ಕೆಲ ಜೋಡಿ 5, 10 ಹಾಗೂ 16 ವರ್ಷಗಳಿಂದ ಬೇರೆ ಬೇರೆ ವಾಸಿಸುತ್ತಿದ್ದರೆ, ಮತ್ತೊಂದು ಪ್ರಕರಣದಲ್ಲಿ ಕೇವಲ ಮೂರು ತಿಂಗಳ ಸಂಸಾರದ ಬಳಿಕ ದೂರವಾಗಿದ್ದ ದಂಪತಿಯೂ ಮತ್ತೆ ಒಂದಾದರು.
ಕುಟುಂಬದ ಕಲಹಗಳು ಯಾವುದೇ ಮನೆಯಲ್ಲೂ ಉಂಟಾಗಬಹುದು. ಆದರೆ, ಸಮಸ್ಯೆಗಳನ್ನು ಮರೆತು ಪರಸ್ಪರ ಅರ್ಥೈಸಿಕೊಂಡು ಜೀವನ ನಡೆಸುವ ಮಹತ್ವವನ್ನು ದಂಪತಿಗೆ ಮನವರಿಕೆ ಮಾಡಿಕೊಡಲಾಯಿತು. ಒಟ್ಟಾಗಿ ಬದುಕಿದರೆ ಜೀವನ ಹೇಗೆ ಸುಂದರವಾಗಿರುತ್ತದೆ ಹಾಗೂ ಬೇರೆ ಬೇರೆ ಇದ್ದರೆ ಎದುರಾಗುವ ಸಂಕಷ್ಟಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನಕ್ಕೆ ಧಾರವಾಡದ ವಕೀಲರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಸಹಕಾರ ದೊರೆತಿದೆ ಎಂದರು.
ಹಿರಿಯ ಸಿವಿಲ್​ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಹಾಗೂ ವಕೀಲರು ಇದ್ದರು.
ಈ ವೇಳೆ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡರು.