ವಿಜಯನಗರ ಜಿಲ್ಲೆ ರೈತರು ಉಳ್ಳಾಗಡ್ಡಿ ಜಮೀನಿಗೆ ಟ್ಯಾಂಕರ್ ನೀರು ಪೂರೈಸುತ್ತಿರುವುದು. 
ಧಾರವಾಡ

ಉಳ್ಳಾಗಡ್ಡಿ ಬೆಳೆ ಉಳಿಸಿಕೊಳ್ಳಲು ಹರಸಾಹಸ

ಕೈಕೊಟ್ಟ ಮಳೆ ಮಧ್ಯೆ ನೀರುಣಿಸಲು ಟ್ಯಾಂಕರ್​ ಮೊರೆ

ಬಸವರಾಜ ಎಸ್. ಇದ್ಲಿ
ಸಿದ್ದೇಶ ಉತ್ತಂಗಿ,
ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲ ಆವರಿಸಿದೆ. ಬೋರವೆಲ್​ ಇರುವವರು ಒಂದಿಷ್ಟು ನೀರು ಹಾಕಿ ಉಳ್ಳಾಗಡ್ಡಿ ಬೆಳೆ ಉಳಿಸಿಕೊಂಡಿದ್ದಾರೆ. ಕೆಲವರು ಟ್ಯಾಂಕರ್​ ನೀರು ತಂದು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಉತ್ಪಾದನೆ ವೆಚ್ಚ ಹೆಚ್ಚಾಗಿದೆ. ಬೆಲೆ ಒಂದಿಷ್ಟು ಹೆಚ್ಚಾದರೆ ಅದರ ಫಲ ರೈತರಿಗೆ ಸಿಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಬರಬೇಕು. ರೈತರ ಸಾಲ ಮನ್ನಾ ಮಾಡಬೇಕು. ಎಕರೆಗೆ 30 ಸಾವಿರ ರೂ. ಬೆಳೆಹಾನಿ ಪರಿಹಾರ ನೀಡಬೇಕು.
ಸಿದ್ದೇಶ ಉತ್ತಂಗಿ, ಕರ್ನಾಟಕ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ

ಹುಬ್ಬಳ್ಳಿ: ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲಕ್ಕೆ ಕೃಷಿ ಕ್ಷೇತ್ರ ನಲುಗಿ ಹೋಗಿದ್ದು, ಒಣ ಭೂಮಿಯಲ್ಲಿ ಬೆಳೆ ಬಾರದೇ ರೈತರು ಕಂಗಾಲಾಗಿದ್ದಾರೆ.

ಕೆಲ ಜಿಲ್ಲೆಗಳಲ್ಲಿ ಉಳ್ಳಾಗಡ್ಡಿ ಬೆಳೆಗಾರರು ಅಳಿದು ಉಳಿದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ಮಳೆ ಇಲ್ಲದೇ ಒಣಗುತ್ತಿರುವ ಉಳ್ಳಾಗಡ್ಡಿ ಜಮೀನಿಗೆ ಟ್ಯಾಂಕರ್​ ಮೂಲಕ ನೀರು ತಂದು ಹಾಕಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ದರ ಹೆಚ್ಚಾಗಿರುವ ಕಾರಣ ಒಂದಿಷ್ಟು ಉಳ್ಳಾಗಡ್ಡಿ ಬೆಳೆದು ಅದರಲ್ಲಾದರೂ ಲಾಭವಾಗಬಹುದು ಎಂದುಕೊಂಡು ಇಂತಹ ಸಾಹಸಕ್ಕೆ ರೈತರು ಕೈ ಹಾಕಿದ್ದಾರೆ.

ಹುಬ್ಬಳ್ಳಿ ಮಾರುಕಟ್ಟೆಗೆ ಅಕ್ಕಪಕ್ಕದ ಅನೇಕ ಜಿಲ್ಲೆಗಳಿಂದ ಉಳ್ಳಾಗಡ್ಡಿ ಆವಕವಾಗುತ್ತದೆ. ವಿಶೇಷವಾಗಿ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಗದಗ, ವಿಜಯನಗರ ಸೇರಿದಂತೆ ವಿವಿಧೆಡೆಯಿಂದ ಉಳ್ಳಾಗಡ್ಡಿ ಬರುತ್ತದೆ.

ಪ್ರತಿ ವರ್ಷ ಗಣೇಶೋತ್ಸವ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಉಳ್ಳಾಗಡ್ಡಿ ಆವಕವಾಗುತ್ತಿತ್ತು. ಆದರೆ, ಈ ವರ್ಷ ಉಳ್ಳಾಗಡ್ಡಿ ಆವಕದಲ್ಲಿ ತೀರಾ ಇಳಿಕೆಯಾಗಿದೆ.

ಸ್ಥಳಿಯ ಅಂದರೆ ಅಕ್ಕಪಕ್ಕದ ಜಿಲ್ಲೆಗಳಿಂದ ಉಳ್ಳಾಗಡ್ಡಿ ಕೇವಲ ಸಾವಿರ ಕ್ವಿಂಟಾಲ್​ ವರೆಗೆ ಬರುತ್ತಿದೆ. ಅದು ಕೂಡ ಈ ವಾರದಿಂದ ಇನ್ನಷ್ಟು ಇಳಿಕೆಯಾಗಿದೆ. ಸೀಸನ್​ನಲ್ಲಿ ಕನಿಷ್ಠ 10 ಸಾವಿರ ಕ್ವಿಂಟಾಲ್​ ವರೆಗೆ ಬರುತ್ತಿತ್ತು.

ಈ ಎಲ್ಲ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ. ಸದ್ಯ ಮಹಾರಾಷ್ಟ್ರದ ಪುಣೆ ತಳಿಯ ಉಳ್ಳಾಗಡ್ಡಿ ನಿತ್ಯ 1500 ಕ್ವಿಂಟಾಲ್​ ಆವಕವಾಗುತ್ತಿದೆ. ಪ್ರತಿ ಕ್ವಿಂಟಾಲ್​ಗೆ 4 ಸಾವಿರ ರೂ. ವರೆಗೆ ಮಾರಾಟವಾಗುತ್ತಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೆಜಿಗೆ 50, 60 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಮಳೆ ಇಲ್ಲದ ಕಾರಣಕ್ಕೆ ಬಿತ್ತಿದ ಉಳ್ಳಾಗಡ್ಡಿ ಬೆಳೆ ಒಣಗಿ ಹೋಯಿತು. ಬೀಜ, ಗೊಬ್ಬರಕ್ಕೆ ಹಾಕಿದ ಹಣವೂ ವಾಪಸ್​ ಬರದಂತಾಗಿದೆ ಎಂದು ರೈತ ಮುಖಂಡ ಈರಪ್ಪ ಕಂಕೊಳ್ಳಿ ಹೇಳಿದರು.