ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದಲ್ಲಿ ಮಂಗಳವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿದರು. ಮಂಜುನಾಥ ಮಸೂತಿ, ಎ.ಸಿ. ಚಾಕಲಬ್ಬಿ, ಮಲ್ಲಣ್ಣ ಅಷ್ಟಗಿ, ಸುರೇಶಬಾಬು ತಳವಾರ ಇತರರಿದ್ದರು.
ಉಪ್ಪಿನಬೆಟಗೇರಿ: ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ವಿರೂಪಾಕ್ಷೇಶ್ವರ ಜಾತ್ರೆ ಮಾ.13ರಿಂದ 23ವರೆಗೆ ಜರುಗಲಿದ್ದು, ಜಾತ್ರೆ ಅಂಗವಾಗಿ ಹಲವಾರು ಕಾರ್ಯಕ್ರಮಗಳು ಜರುಗಲಿವೆ ಎಂದು ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಶ್ರೀಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.13 ರಿಂದ 21ರ ವರೆಗೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ 6.30ಕ್ಕೆ ನಾಡಿನ ಮಠಾಧೀಶರ ಸಮ್ಮುಖದಲ್ಲಿ ನಂದಿಕೇಶ್ವರದ ಶ್ರೀ ವಿರೇಶ್ವರ ಶಾಸ್ತ್ರಿಗಳಿಂದ ಶರಣರ ಜೀವನ ದರ್ಶನ ಪ್ರವಚನ ಪ್ರಾರಂಭವಾಗಲಿದೆ. ಪ್ರಸಕ್ತ ಸಾಲಿನ ಪ್ರತಿಷ್ಠಿತ ಲವಣಗಿರಿ ಪ್ರಶಸ್ತಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ.ವಿ.ಶ್ರೀಶಾನಂದ ಭಾಜನರಾಗಿದ್ದು, ಮಾ.14 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಮಾ.23 ರಂದು ದೊಡವಾಡ ಗ್ರಾಮದ ಶ್ರೀ ಜಡಿಸಿದ್ಧೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಗ್ರಾಮದ ಸಂಕಣ್ಣವರ ಹಾಗೂ ಬರಬರಿ ಬಂಧುಗಳಿಂದ ಜಂಗಮ ವಟುಗಳಿಗೆ ಅಯ್ಯಚಾರ ಹಾಗೂ ಶಿವಧೀಕ್ಷೆ ಜರುಗುವುದು. ನಂತರ ಸಾವಿರಾರು ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಅಂದು ಸಂಜೆ 3.30ಕ್ಕೆ ಮೂರುಸಾವಿರ ವಿರಕ್ತಮಠದಿಂದ ಮಮದಾಪುರದ ಅಭಿನವ ಶ್ರೀ ಮುರುಘೇಂದ್ರ ಮಹಾಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತ್ಸವ (ಜಂಗಮೋತ್ಸವ) ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಪಲ್ಲಕ್ಕಿ ಉತ್ಸವವು ವಿರೂಪಾಕ್ಷೇಶ್ವರ ದೇವಸ್ಥಾನ ತಲುಪಿದ ನಂತರ ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಶ್ರೀ ವಿರೂಪಾಕ್ಷೇಶ್ವರ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಅಂದು ರಾತ್ರಿ 10.30ಕ್ಕೆ ಮಾತು ಬಿದ್ದಿತು, ಮೌನ ಗೆದ್ದಿತು ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ಮಾ.24, 25, 26 ಮೂರು ದಿನಗಳ ಕಾಲ ಸ್ಥಳೀಯ ಮಾಜಿ ಕುಸ್ತಿ ಪೈಲ್ವಾನರ ಸಂಘದಿಂದ ಬಯಲು ಕುಸ್ತಿಗಳು ಜರುಲಿವೆ ಎಂದು ತಿಳಿಸಿದರು.
ಶ್ರೀಮಠದ ಭಕ್ತ ಮಂಜುನಾಥ ಮಸೂತಿ ಮಾತನಾಡಿ, ಕಾರ್ಯಕ್ರಮಗಳಲ್ಲಿ ಮಂತ್ರಿಗಳು, ರಾಜಕಾರಣಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವರು. ಪ್ರತಿದಿನ ಹಿರಿಯರಿಗೆ ಸನ್ಮಾನ ಹಾಗೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮುಖಂಡ ಸುರೇಶಬಾಬು ತಳವಾರ ಮಾತನಾಡಿ, ಗ್ರಾಮ ಹಾಗೂ ಸುತ್ತಲಿನ ಗ್ರಾಮಸ್ಥರ ಅಭಿಪ್ರಾಯದಂತೆ ಶ್ರೀಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿಗಳು ಪ್ರಸಕ್ತ ವರ್ಷದ ಶ್ರಾವಣ ಮಾಸದಿಂದ ಮುಂಬರುವ 2027 ಮಾ.11ರ ವರೆಗೆ ಉಪ್ಪಿನಬೆಟಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಂಚಾರಿ ಬಸವ ಪುರಾಣ ನಡೆಸುವ ಸಂಕಲ್ಪ ತೊಟ್ಟಿದ್ದಾರೆ. ಅದಕ್ಕೆ ಪೂರ್ವ ತಯಾರಿ ನಡೆಯುತ್ತಿದೆ ಎಂದರು. ವಕೀಲ ಎ.ಸಿ. ಚಾಕಲಬ್ಬಿ, ಮಲ್ಲಣ್ಣ ಅಷ್ಟಗಿ ಮಾತನಾಡಿದರು. ಗೋಷ್ಠಿಯಲ್ಲಿ ಕಲ್ಲನಗೌಡ ಪಾಟೀಲ, ಬಸವರಾಜ ತಳವಾರ, ಕೃಷ್ಣಾ ಬುದ್ನಿ, ಆತ್ಮಾನಂದ ಮಡಿವಾಳರ ಇತರರಿದ್ದರು.