ಧಾರವಾಡ ಕರ್ನಾಟಕ ಪ್ರೌಢಶಾಲೆಯಲ್ಲಿ ಸೋಮವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ರೀಡಾ ಹಬ್ಬ ಉದ್ಘಾಟಿನೆ 
ಧಾರವಾಡ

ಆರೋಗ್ಯವಾಗಿದ್ದರೆ ಸಾಧನೆ ಸಾಧ್ಯ

ಆರೋಗ್ಯವಾಗಿದ್ದರೆ ಸಾಧನೆ ಸಾಧ್ಯ
ಧಾರವಾಡ: ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಕ್ರೀಡೆಗಳಿಂದ ಆರೋಗ್ಯ ಸದೃಢವಾಗುತ್ತದೆ ಎಂದು ಸಾಹಿತಿ, ದೈಹಿಕ ಶಿಕ್ಷಣ ತಜ್ಞ ಶಿವಾನಂದ ನರಹಟ್ಟಿ ಹೇಳಿದರು.
ನಗರದ ಕರ್ನಾಟಕ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ರೀಡಾ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯದಷ್ಟೇ ಕ್ರೀಡೆ, ವ್ಯಾಯಾಮಗಳಿಗೆ ವಿದ್ಯಾರ್ಥಿಗಳು ಸಮಯ ನಿಗದಿ ಪಡಿಸಿಕೊಳ್ಳಬೇಕು. ಸೋಲು-ಗೆಲುವು ಮುಖ್ಯವಲ್ಲ. ಆಟದಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಮೈದಾನದಲ್ಲಿ ಕಲಿಯುವ ಶಿಸ್ತು, ಸಮಯ ಪಾಲನೆ, ಒಗ್ಗಟ್ಟು, ಬಿದ್ದು-ಏಳುವ ಧೈರ್ಯ ಪುಸ್ತಕದಲ್ಲಿ ಸಿಗುವ ಪಾಠಗಳಲ್ಲ. ಆರೋಗ್ಯವಾಗಿ ಇದ್ದರೆ ಮಾತ್ರ ಬುದ್ಧಿಶಕ್ತಿ ಹೆಚ್ಚಳದೊಂದಿಗೆ ಸಾಧನೆ ಸಾಧ್ಯ. ಪ್ರಮುಖವಾಗಿ ದೇಶೀಯ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯ ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಇ. ಬೋರ್ಡ್ನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ, ಹೆಚ್ಚಿನ ಸಮಯವನ್ನು ದೈಹಿಕ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದರು.
ಕೆಇ ಬೋರ್ಡ್ ಕ್ರೀಡಾ ಅಭಿವೃದ್ಧಿ ಅಧಿಕಾರಿ ವಸಂತ ಮುರುಡೇಶ್ವರ ಮಾತನಾಡಿ, ಕರ್ನಾಟಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಂತಾರಾಷ್ಟಿಯ ಮಟ್ಟದಲ್ಲಿ ಬಾಸ್ಕೆಟ್ ಬಾಲ್ ಹಾಗೂ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಪ್ರೌಢಶಾಲೆಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ವಿಶ್ವನಾಥ ದೇಶಪಾಂಡೆ, ಆಡಳಿತಾಧಿಕಾರಿ ಜಿ.ಆರ್. ಭಟ್, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಕಾಶ ಬೋಂಗಾಳೆ ಉಪಸ್ಥಿತರಿದ್ದರು. ಪ್ರಾಚಾರ್ಯ ಎನ್.ಎನ್. ಸವಣೂರ ಸ್ವಾಗತಿಸಿದರು. ಹಿರಿಯ ಶಿಕ್ಷಕ ವಿ.ಬಿ.ಶಿಂಗೆ ಪರಿಚಯಿಸಿದರು.