ರಾಜ್ಯಮಟ್ಟದ ಮಲ್ಲಕಂಭ ಕ್ರೀಡೋತ್ಸವ ಉದ್ಘಾಟನೆ 
ಧಾರವಾಡ

ಧಾರವಾಡದಲ್ಲಿ ಶೀಘ್ರ ಕ್ರೀಡಾ ಸಂಕೀರ್ಣ ಪ್ರಾರಂಭ

ಧಾರವಾಡ: ಮಲ್ಲಕಂಭ ಕ್ರೀಡೋತ್ಸವ ಧಾರವಾಡದ ನೂತನ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿರುವುದು ಸಂತಸದ ಸಂಗತಿ. ಕ್ರೀಡಾ ಸಂಕೀರ್ಣದಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಸರಿಪಡಿಸಿ, ಟೆಂಡರ್ ಪ್ರಕ್ರೀಯೆ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರೀಡಾ ಸಂಕೀರ್ಣವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಮೆಚೂರ ಮಲ್ಲಕಂಭ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನೂತನ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಲ್ಲಕಂಭ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು. ಮಲ್ಲಕಂಭ ಕ್ರೀಡೆಯು ಇತ್ತೀಚಿನ ಕ್ರೀಡೆಯಲ್ಲ. ಇದು ರಾಮಾಯಣ, ಪುರಾಣಗಳಲ್ಲಿ ಮಾನಸ-ಉಲ್ಲಾಸ ಗ್ರಂಥಗಳಲ್ಲಿ ಇದೆ. ಈ ಕ್ರೀಡೆಯಲ್ಲಿ ಮಾನಸಿಕ ಏಕಾಗ್ರತೆ ಬಹಳ ಮುಖ್ಯ. ಈ ಮಲ್ಲಕಂಭ ಕ್ರೀಡೋತ್ಸವ ರಾಜ್ಯದ 14 ಜಿಲ್ಲೆಯ ಒಟ್ಟು 252 ಕ್ರೀಡಾಪಟುಗಳು ಭಾಗವಹಿಸಿರುವುದು ಖುಷಿ ವಿಚಾರ ಎಂದರು.
ಬಾಜಿರಾವ್ ಪೇಶ್ವೆಯವರ ಗುರುಗಳಾದ ಬಾಳಭಟ್ಟರು ಈ ಕಲೆಯನ್ನು ಪುನರುಜ್ಜೀವನಗೊಳಿಸಿದರು. ಸೈನಿಕರಿಗೆ ಮನೋಬಲ ತುಂಬಿಸಲಿಕ್ಕೆ ಮತ್ತು ಹೊರಾಟದ ಕೆಚ್ಚು, ಏಕಾಗ್ರತೆ ಹೆಚ್ಚಿಸಲಿಕ್ಕೆ ಈ ಕ್ರೀಡೆಯನ್ನು ನಮ್ಮ ಭಾಗದಲ್ಲಿ ಹೆಚ್ಚು ಪ್ರಚಲಿತ ಪಡಿಸಿದರು. ಪ್ರಧಾನ ಮಂತ್ರಿಗಳು ಮಲ್ಲಕಂಭ ಕ್ರೀಡೆಯನ್ನು ಖೇಲೋ ಇಂಡಿಯಾ ಕ್ರೀಡೆಯಲ್ಲಿ ಸೇರ್ಪಡೆಗೊಳಿಸಿದರು. ಆದಿವಾಸಿಗಳು ಸಹ ಮಲ್ಲಕಂಭ ಕ್ರೀಡೆ ಆಡಲು ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಧಾರವಾಡದಲ್ಲಿ ರಾಜ್ಯಮಟ್ಟದ ಮಲ್ಲಕಂಭ ಕ್ರೀಡೋತ್ಸವ ಮೊಟ್ಟ ಮೊದಲ ಭಾರಿಗೆ ಆಯೋಜಿಸಲಾಗಿದೆ. ಮಲ್ಲಕಂಭ ಮತ್ತು ರೋಪ್ ಕ್ರೀಡೆಗಳು ಬಹಳ ಪ್ರಾಚೀನವಾಗಿದ್ದು, ಈ ಮಲ್ಲಕಂಭ ವಿದ್ಯೆಯನ್ನು 1965ರಲ್ಲಿ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಎನ್.ಎಚ್.ಪಾಟೀಲ ಅವರೊಂದಿಗೆ ಪ್ರಾರಂಭಿಸಲಾಯಿತು. ಈ ಮಲ್ಲಕಂಭ ಕ್ರೀಡೋತ್ಸವ ಉಳಿಸಿ ಬೆಳಸಲು ಲಕ್ಷೇಶ್ವರದಲ್ಲಿ ಕಾರ್ಯಕ್ರಮ ಮಾಡಿ, ಆಲ್ ಇಂಡಿಯಾ ಅಧ್ಯಕ್ಷ ಗೋಪೆ ಅವರ ಸಮ್ಮುಖದಲ್ಲಿ ಮಲ್ಲಕಂಭ ಕ್ರೀಡೆಯನ್ನು ನಡೆಸಲಾಯಿತು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಮೆಚೂರ ಮಲ್ಲಕಂಭ ಸಂಸ್ಥೆ ಅಧ್ಯಕ್ಷ ಪ್ರಕಾಶ ಮ್ಯಾಗೇರಿ, ಕಾರ್ಯದರ್ಶಿ ಎಸ್.ಎಪ್. ಕೊಡ್ಲಿ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ಸುರೇಶ ಬೇದರೆ, ವಿಷ್ಣು ಕೇರಳೆ, ಸಿ.ಕೆ. ಚನ್ನಾಳ ಇತರರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಎಚ್. ಅಮರಾಪುರ ಸ್ವಾಗತಿಸಿದರು. ಶಾಂಭಯ್ಯ ಹಿರೇಮಠ ನಿರೂಪಿಸಿದರು. ಬಾಳಬಳಗ ವಿದ್ಯಾರ್ಥಿಗಳು ಪ್ರಾರ್ಥಿಸಿದರು.