ಹುಬ್ಬಳ್ಳಿ ಕಾನೂನು ವಿವಿ 9ನೇ ಅಂತರ್ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸಮಾರೋಪ ಕಾರ್ಯಕ್ರಮ ದಲ್ಲಿ ಪ್ರೊ. ಡಾ. ಬಸವರಾಜು ಮಾತನಾಡಿದರು.
ಧಾರವಾಡ: ಕ್ರೀಡೆ ಅತ್ಯಗತ್ಯವಾಗಿದೆ. ಇಂದಿನ ಯುವಪೀಳಿಗೆ ಕ್ರೀಡೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪದ್ಮಾವತಿ ಮಾನೆ ಅಭಿಪ್ರಾಯಪಟ್ಟರು.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ 9ನೇ ಅಂತರ್ ಮಹಾವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಬಸವರಾಜು ಮಾತನಾಡಿ, ಭಾರತೀಯರು ಕ್ರಿಕೆಟ್, ಚೆಸ್, ಹಾಕಿ, -ಪುಟ್‌ಬಾಲ್ ಸೇರಿ ವಿವಿಧ ಕ್ರೀಡೆಗಳಲ್ಲಿ ವಿಶ್ವಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಪ್ರತಿಭಾವಂತ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುವಂತೆ ವಿಶ್ವವಿದ್ಯಾಲಯವು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿ ವೇದಿಕೆ ಕಲ್ಪಿಸುತ್ತಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಡಾ. ರತ್ನಾ ಭರಮಗೌಡರ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಖಾಲಿದ ಖಾನ್, ಗಿರೀಶ ಗೌಡ ವೇದಿಕೆಯಲ್ಲಿದ್ದರು. ಸಂಯೋಜಿತ ಕಾನೂನು ಮಹಾವಿದ್ಯಾಲಯಗಳ ಎಲ್ಲ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಪ್ರಮಾಣಪತ್ರ ನೀಡಲಾಯಿತು. ಬಳಿಕ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಟ್ರೋಫಿಗಳನ್ನು ವಿತರಿಸಲಾಯಿತು.
ಶಿವಮೋಗ್ಗದ ಸಿಬಿಆರ್ ನ್ಯಾಷನಲ್ ಕಾನೂನು ಕಾಲೇಜಿನ ವಿದ್ಯಾರ್ಥಿ ಎಂ.ಡಿ. ಮುಜಮ್ಮಿಲ್ಲಾ ಅವರು ಉದ್ದ ಜಿಗಿತದಲ್ಲಿ ಕೂಟ ದಾಖಲೆ ನಿರ್ಮಿಸಿದರು. ಬೆಂಗಳೂರು ರಾಮಯ್ಯ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಅಕ್ಷಯಾ ಅವರು 200 ಮೀ. ಓಟವನ್ನು 27.14 ಸೆಕೆಂಡ್‌ನಲ್ಲಿ ತೇರ್ಗಡೆ ಮಾಡಿ ಕೂಟ ದಾಖಲೆ ಮಾಡಿದರು.
ಜಮಖಂಡಿಯ ಬಿಎಲ್‌ಡಿಎ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಭುವನೇಶ್ವರಿ ಅವರು 1500 ಮೀ. ಓಟ ಮತ್ತು 3000 ಮೀ. ಓಟದಲ್ಲಿ ಕೂಟ ದಾಖಲೆ ನಿರ್ಮಿಸಿದರು. ಮಂಗಳೂರು ಎಸ್‌ಡಿಎಂ ಕಾಲೇಜಿನ ವೃಥಾ ಹೆಗಡೆ ಅವರು ಶಾಟ್‌ಪುಟ್‌ನಲ್ಲಿ, ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ಆಕೃತಿ ಕೆ. ಅವರು 4*400 ಮೀ. ರಿಲೇಯಲ್ಲಿ ಕೂಟ ದಾಖಲೆ ಮಾಡಿ ಗಮನ ಸೆಳೆದರು.