ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ (Spirituality) ಪ್ರವಚನ ಕಾರ್ಯಕ್ರಮವನ್ನು ಗಿರಿಮಲ್ಲಯ್ಯ ನಂದಿಕೋಲಮಠ ಉದ್ಘಾಟಿಸಿದರು. 
ಧಾರವಾಡ

Spirituality ಅಧ್ಯಾತ್ಮದಿಂದ ವಿಶ್ವಶಾಂತಿ, ಸಾಮರಸ್ಯ ಸಾಧ್ಯ

ಉಪ್ಪಿನಬೆಟಗೇರಿ: ದ್ವಂದ್ವಗಳನ್ನು ಅಳಿಸಿ ಹಾಕಿ ಅಂತರಂಗ ಬಹಿರಂಗಗಳಲ್ಲಿ ಅರಿವಿನ ಮಹಾಪ್ರಕಾಶವನ್ನು ಬೆಳಗಿಸುವ ಅಧ್ಯಾತ್ಮದಿಂದ Spirituality ವಿಶ್ವಶಾಂತಿ, ಸಾಮರಸ್ಯ ಸಾಧ್ಯ ಎಂದು ಹೆಬ್ಬಳ್ಳಿ ಬ್ರಹ್ಮಚೈತನ್ಯ ಆಶ್ರಮದ ಶ್ರೀ ದತ್ತಾವಧೂತ ಸ್ವಾಮೀಜಿ ಹೇಳಿದರು.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ 2ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಆರಂಭವಾದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧರ್ಮ ಸಿದ್ಧಾಂತಗಳ ತತ್ವ, ಚಿಂತನೆ ಮತ್ತು ಆಚರಣೆಗಳಲ್ಲಿ ವೈವಿಧ್ಯಗಳಿದ್ದರೂ ಎಲ್ಲರೂ ಸೇರುವ ಗುರಿ ಮಾತ್ರ ಒಂದೇ ಆಗಿದೆ. ಸಾಕ್ಷಾತ್ಕಾರ ಸಂಪಾದನೆಯಲ್ಲಿ ಮಾನವನ ಬದುಕಿನ ಸಾರ್ಥಕತೆ ಅಡಗಿದೆ ಎಂದರು.
ಕಲಬುರ್ಗಿ ಜಿಲ್ಲೆ ಶಹಬಾದ್ ತಾಲೂಕಿನ ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಹೆಬ್ಬಳ್ಳಿ ಒಂದು ತಪೋತಾಣ, ಜತೆಗೆ ಧಾರ್ಮಿಕ ಕ್ಷೇತ್ರವೂ ಆಗಿದೆ. ಇಲ್ಲಿಯ ಹಿರಿಯರು ಹೇಳುವಂತೆ ಹೆಬ್ಬಳ್ಳಿ ಗ್ರಾಮದಲ್ಲಿ ನೂರೊಂದು ಬಾವಿಗಳು ಹಾಗೂ ನೂರೊಂದು ದೇವಾಲಯಗಳು ಇರುವುದು ವಿಶೇಷವಾಗಿದೆ. ಇಲ್ಲಿಯ ಜನಮನದಲ್ಲಿ ಧರ್ಮ ಮತ್ತು ಭಗವಂತನ ಅಸ್ತಿತ್ವದಲ್ಲಿ ಬಲವಾದ ನಂಬಿಕೆ ಹಾಗೂ ಭಕ್ತಿ ಮೇಳೈಸಿರುವುದು ಎದ್ದು ಕಾಣುತ್ತಿದೆ ಎಂದರು.
ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಶಿಷ್ಯರಾದ ಶ್ರೀ ಶ್ರೇಷ್ಠ ದೇವರು, ಚನ್ನಬಸಪ್ಪ ಮಟ್ಟಿ, ಬಸಯ್ಯ ಮಠಪತಿ, ಬಸವರಾಜ ಮೊರಬದ, ಚೆನ್ನಪ್ಪ ದೇಸಾಯಿ, ಅಶೋಕ ಸೂರ್ಯವಂಶಿ, ಇತರರು ಇದ್ದರು. ಶ್ರೀಶೈಲ ಲಕ್ಕಮ್ಮನವರ, ಗಿರಿಮಲ್ಲಯ್ಯ ನಂದಿಕೋಲಮಠ, ಶಿವಾನಂದ ಹೂಗಾರ ನಿರ್ವಹಿಸಿದರು.