ಧಾರವಾಡ: ನಗರದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಶ್ರೀ ಹನುಮಂತ ದೇವರ ಮೂರ್ತಿಗೆ ಧನ, ಕನಕ ರೂಪದಲ್ಲಿ ದಾನಿಗಳಿಂದ ನೆರವು ಪಡೆದು ಬಂಗಾರದ ಕವಚ ತಯಾರಿಸಲಾಗಿದೆ. ಬೆಂಗಳೂರಿನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರಿಂದ ಇತ್ತೀಚೆಗೆ ಬಂಗಾರದ ಕವಚ ಸಮರ್ಪಣ (ಪೂಜಿತ)ಗೊಂಡಿದೆ.
ಡಿ. 6ರಂದು ಹನುಮಂತ ದೇವರಿಗೆ ಬಂಗಾರದ ಕವಚದ ವಿಶೇಷ ಅಲಂಕಾರ ಮಾಡಲಾಗುತ್ತದೆ. ಸಂಜೆ ದಶಸಹಸ್ರ ದೀಪೋತ್ಸವ ಜರುಗಲಿದೆ. ಭಕ್ತರ ಹರಕೆಗಳನ್ನು ಪೂರೈಸುತ್ತಿರುವ ಆಂಜನೇಯನ ದರ್ಶನ ಪಡೆದು, ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ದೇಸಾಯಿ ಮನೆತನದ ಪರ್ಯಾಯಸ್ಥರು ತಿಳಿಸಿದ್ದಾರೆ.
ನುಗ್ಗಿಕೇರಿ ಆಂಜನೇಯ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ. ಧಾರವಾಡದ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಇದು ನಿದರ್ಶನ. ದ್ವಾಪರ ಯುಗದಲ್ಲಿ ಮಹಾಭಾರತದ ಜನಮೇಜಯ ಮಹಾರಾಜರು ಈ ಕ್ಷೇತ್ರದಲ್ಲಿ ಆಂಜನೇಯನನ್ನು ಪ್ರತಿಷ್ಠಾಪಿಸಿದ್ದರೆಂದು ಪುರಾಣಗಳು ತಿಳಿಸುತ್ತವೆ. ನಂತರ 15ನೇ ಶತಮಾನದಲ್ಲಿ ಶ್ರೀ ವ್ಯಾಸರಾಜರು ಆಂಜನೇಯನನ್ನು ಪುನಃ ಪ್ರತಿಷ್ಠಾಪಿಸಿದ್ದಾರೆ. ನುಗ್ಗಿಕೇರಿ ಪ್ರದೇಶದ ಸುತ್ತಲಿರುವ ಗುಡ್ಡಗಳಿಂದ ಮಳೆಗಾಲದಲ್ಲಿ ನೀರು ನುಗ್ಗಿ ದೇವಸ್ಥಾನದ ಸುತ್ತ ದೊಡ್ಡ ಕೆರೆ ರೂಪುಗೊಂಡಿದ್ದರಿಂದ "ನುಗ್ಗಿಕೇರಿ' ಎಂದು ಹೆಸರು ಬಂತು. ಹೀಗಾಗಿ "ನುಗ್ಗಿಕೇರಿ ಆಂಜನೇಯ' ಎಂದು ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಸುಮಾರು 4 ಅಡಿ ಎತ್ತರದ ಸುಂದರ ಆಂಜನೇಯನ ಸನ್ನಿಧಿ, ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.