Solar power ಹುಬ್ಬಳ್ಳಿಯಲ್ಲಿ ಸೌರರಥ ಜನಜಾಗೃತಿ ಅಭಿಯಾನಕ್ಕೆ ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಚಾಲನೆ ನೀಡಿದರು. ಡಾ. ಎಂ.ಆರ್. ಪಾಟೀಲ, ಭಾಲಚಂದ್ರ ಜಾಬಶೆಟ್ಟಿ, ಪ್ರೊ. ವಿ.ಎಂ. ಸಣಗೌಡರ್, ಡಾ. ನಾಗರಾಜ ಏಕಬೋಟೆ, ಡಾ. ಗಿರೀಶ ಚಳಗೇರಿ ಇತರರು ಇದ್ದರು
- ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಚಾಲನೆ
ಹುಬ್ಬಳ್ಳಿ: solar power ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳಿಂದಾಗಿ ಕಡಿಮೆ ವೆಚ್ಚದಲ್ಲಿ ಸೋಲಾರ ಘಟಕಗಳನ್ನು ಅಳವಡಿಸಲು ಸಾಧ್ಯವಾಗಿದೆ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಕಾಶ ತೆವರಿ ಹೇಳಿದರು.
ಇಲ್ಲಿಯ ವಿದ್ಯಾನಗರ ಕ್ಯಾಂಪಸ್ನಲ್ಲಿ ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರು ವಿದ್ಯುತ್ ಸ್ವಾವಲಂಬನೆ ಹೊಂದಲು ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದಾಗಿ ರಾಷ್ಟ್ರವ್ಯಾಪಿ ಆಂದೋಲನವಾಗಿ ಹೊರಹೊಮ್ಮುತ್ತಿದೆ. ಇನ್ನೂ ಹೆಚ್ಚು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವವಿದ್ಯಾಲಯವು ಸೌರ ರಥ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಈ ದಿಸೆಯಲ್ಲಿ ಗ್ರೀನ್ಲ್ಯಾಂಡ್ ಬಯೋಟೆಕ್ನ ಭಾಲಚಂದ್ರ ಜಾಬಶೆಟ್ಟಿ ಹಾಗೂ ದಾಕ್ಷಾಯಿಣಿ ಜಾಬಶೆಟ್ಟಿ ಅವರ ಶ್ರಮ ಸ್ತುತ್ಯಾರ್ಹವಾಗಿದೆ ಎಂದರು.
ಅಭಿಯಾನದ ಸಂಚಾಲಕ ಭಾಲಚಂದ್ರ ಜಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆ ಛಾವಣಿ ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ಸೋಲಾರ ಪಂಪ್ಸೆಟ್ಗಳ ಅಳವಡಿಕೆ ಕುರಿತು ರೈತರಲ್ಲಿ ಜಾಗೃತಿಯನ್ನುಂಟು ಮಾಡಲು ಮತ್ತು ತಾಂತ್ರಿಕ ಬೆಂಬಲ ನೀಡಲು ಪ್ರಥಮ ಹಂತದಲ್ಲಿ ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಜಾಗೃತಿ ಸಭೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ಪ್ರಾತ್ಯಕ್ಷಿಕೆ ಮುಂತಾದವುಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಪಾಟೀಲ ಸ್ವಾಗತಿಸಿದರು.
ಪ್ರೊ. ವಿ.ಎಂ. ಸಣಗೌಡರ್, ಡಾ. ನಾಗರಾಜ ಏಕಬೋಟೆ, ಡಾ. ಗಿರೀಶ ಚಳಗೇರಿ, ಡಾ. ವಿನಾಯಕ ಕುಲಕರ್ಣಿ, ಡಾ. ಮಹೇಶ ಗೋರಾವರ್, ಡಾ. ವೀರೇಶ ಬಾಳಿಕಾಯಿ, ಪ್ರೊ. ಆನಂದ ಲಕ್ಕುಂಡಿ ಇತರರು ಉಪಸ್ಥಿತರಿದ್ದರು.