sleep apniya ಹುಬ್ಬಳ್ಳಿಯ ತೋಳನಕೆರೆಯಿಂದ ಶುಕ್ರವಾರ ಸ್ಲೀಪ್ ಸೆಂಟರ್ ವತಿಯಿಂದ ಏರ್ಪಡಿಸಿದ್ದ ಜಾಗೃತಿ ರ್ಯಾಲಿಗೆ ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಚಾಲನೆ ನೀಡಿದರು. ಡಾ. ಅಮಿತ್ ಸತ್ತೂರ, ಡಾ. ದತ್ತಾ ನಾಡಗೀರ, ಡಾ. ಹರೀಶ ಜೋಶಿ, ಡಾ. ಗೋವಿಂದ ದೇಸಾಯಿ, ಡಾ. ರಾಜೇಂದ್ರ ದುಗಾಣಿ, ಡಾ. ಶೈಲೇಂದ್ರ ಪಾಲ್ಗೊಂಡರು.
- ಡಾ. ಅಮಿತ್ ಸತ್ತೂರ ಅಭಿಪ್ರಾಯ
- ನಿದ್ರಾ ದಿನದ ಅಂಗವಾಗಿ ವಾಕಥಾನ್
ಹುಬ್ಬಳ್ಳಿ: sleep apniya ವಿಶ್ವ ನಿದ್ರಾ ದಿನದ ಅಂಗವಾಗಿ ಇಲ್ಲಿಯ ಗೋಕುಲ ರಸ್ತೆ ನಿರಾಮಯ ಮೆಡಿಕಲ್ ಸೆಂಟರ್ನಲ್ಲಿರುವ ಉತ್ತರ ಕರ್ನಾಟಕ ಸ್ಲೀಪ್ ಸೆಂಟರ್ ವತಿಯಿಂದ ಶುಕ್ರವಾರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಖ್ಯಾತ ಹೃದ್ರೋಗ ತಜ್ಞ ಹಾಗೂ ಸ್ಲೀಪ್ ಸೆಂಟರ್ ನಿರ್ದೇಶಕ ಡಾ. ಅಮಿತ್ ಸತ್ತೂರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕೆ ನಿತ್ಯ ಎಂಟು ತಾಸು ಸುಖ ನಿದ್ದೆ ಅಗತ್ಯ. ಅನೇಕ ಜನರು ಸರಿಯಾದ ನಿದ್ದೆ ಮಾಡದ ಕಾರಣಕ್ಕೆ ಬೇರೆಬೇರೆ ಕಾಯಿಲೆಗಳು ಅಂಟಿಸಿಕೊಳ್ಳುತ್ತಾರೆ. ನಿದ್ರಾಹೀನತೆ ಎಂಬುದು ಮೌನ ಮಹಾಮಾರಿಯಾಗಿದೆ. ಈ ದಿಸೆಯಲ್ಲಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ನಗರದ ತೋಳನಕೆರೆಯಿಂದ ಗೋಕುಲ ರಸ್ತೆಯ ನಿರಾಮಯ ಸೆಂಟರ್ ವರೆಗೆ ವಾಕ್ಥಾನ್ ನಡೆಸಲಾಯಿತು ಎಂದರು.
ಸುಖ ನಿದ್ರೆಯಿಂದ ಮನುಷ್ಯನ ರೋಗ ನಿರೋಧಕ ವ್ಯವಸ್ಥೆ ಸುಧಾರಣೆ ಮಾಡಬಹುದು. ಜೊತೆಗೆ ಚಯಾಪಚಯ ಉತ್ತಮವಾಗುತ್ತದೆ. ಮೆದುಳು, ಹೃದಯ ಸೇರಿದಂತೆ ದೇಹದ ವಿವಿಧ ಅವಯವಗಳು ಸರಿಯಾಗಿ ಹೆಚ್ಚು ಕಾಲ ಕೆಲಸ ಮಾಡಲು ಸಮರ್ಥವಾಗುತ್ತವೆ ಎಂದರು.
ಸ್ಲೀಪ್ ಸೆಂಟರ್ ನಿರ್ದೇಶಕ, ನರರೋಗ ತಜ್ಞ ಡಾ. ದತ್ತಾ ನಾಡಗೀರ ಮಾತನಾಡಿ, ಸಾರ್ವಜನಿಕರಿಗೆ ನಿದ್ರೆಯ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮ ವರ್ಷವಿಡೀ ನಡೆಯುತ್ತಿರುತ್ತದೆ. ಕಳೆದೊಂದು ವರ್ಷದಲ್ಲಿ 400ಕ್ಕೂ ಹೆಚ್ಚು ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅದರಲ್ಲಿ ಶೇ. 90ರಷ್ಟು ಜನರಿಗೆ ನಿದ್ರಾ ಅಪ್ನಿಯಾ ಎಂಬ ಕಾಯಿಲೆ ಕಾಣಿಸಿಕೊಂಡಿದೆ. ಅವರಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ನಿದ್ದೆ ಮಾಡುವಾಗ ಗೊರಕೆ ಹೊಡೆಯುವುದು ನಿದ್ರಾ ಅಪ್ನಿಯಾದ ಮೊದಲ ಲಕ್ಷಣವಾಗಿದೆ. ಇದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.