Election ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ.
- ಸಾಕ್ಷ್ಯ ಸಮೇತ ಚುನಾವಣೆ ಆಯುಕ್ತರಿಗೆ ದೂರು ಸಲ್ಲಿಸುತ್ತೇವೆ.
- ಬಿಎಲ್ಒಗಳು ಯಾರಿಗೂ ಹೆದರದೆ ಅಕ್ರಮವೆಸಗುತ್ತಿದ್ದಾರೆ.
- ಎಸ್ಐಆರ್ ಅರ್ಜಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಹಂಚುತ್ತಿದ್ದಾರೆ.
ಹುಬ್ಬಳ್ಳಿ :
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಮಸೀದಿ, ಸಮುದಾಯ ಭವನ, ಸಾರ್ವಜನಿಕ ಪ್ರದೇಶಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಸಾಮೂಹಿಕವಾಗಿ ನಡೆಯುತ್ತಿದೆ. ಇದೊಂದು ರೀತಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಂತಹ ರೀತಿಯಲ್ಲಿದೆ. ಬಿಎಲ್ಒಗಳು ಯಾರಿಗೂ ಹೆದರದೆ ಅಕ್ರಮವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲೆಡೆಯೂ ಸಾಮೂಹಿಕವಾಗಿ ಕರಪತ್ರ ಹಂಚಿದಂತೆ ಎಸ್ಐಆರ್ ಅರ್ಜಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಹಂಚುತ್ತಿದ್ದಾರೆ. ತಕರಾರು ಮಾಡಿದರೂ ಸಿಬ್ಬಂದಿ ಕ್ಯಾರೇ ಎನ್ನುತ್ತಿಲ್ಲ.
ದಿಲ್ಲಿಗೆ ಬೇಕಾದರೂ ಹೇಳಿರೆಂದು ದಿಟ್ಟತನ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಇದೆಲ್ಲದರ ಬಗ್ಗೆಯೂ ರಾಜ್ಯ ಮುಖ್ಯ ಚುನಾವಣೆ ಆಯುಕ್ತರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿಯ 66ನೇ ವಾರ್ಡ್ನ ಬೂತ್ ನಂ. 55ರ ಮುಲ್ಲಾ ಓಣಿ ಸೇರಿದಂತೆ ಅನೇಕ ಕಡೆ ಎಸ್ಐಆರ್ ಅರ್ಜಿಗಳ ಸಾಮೂಹಿಕ ವಿತರಣೆ ನಡೆದಿದೆ ಎಂದು ದೂರಿದರು.
ಸವಣೂರಿನ ಬೂತ್ ನಂ. 184, 185, 186ರಲ್ಲಿ, ಬಂಕಾಪುರ ಮಸೀದಿಗಳಲ್ಲಿ ಪ್ರಕ್ರಿಯೆ ನಡೆದಿದೆ. ವಾಟ್ಸಪ್ಗಳಲ್ಲಿ ರಾಜಾರೋಷವಾಗಿ ಫೋಟೊ ಸಮೇತ ಅರ್ಜಿಗಳನ್ನು ಹಾಕಿಕೊಂಡಿದ್ದಾರೆ.
ಈ ಬಗ್ಗೆ ದಾಖಲೆಗಳಿವೆ. ಸಾಕ್ಷ್ಯ ಸಮೇತ ಚುನಾವಣೆ ಆಯುಕ್ತರಿಗೆ ದೂರು ಸಲ್ಲಿಸುತ್ತೇವೆ ಎಂದರು.
ಎಸ್ಐಆರ್ ಕುರಿತು ದೇಶಾದ್ಯಂತ ಸುಪ್ರೀಂ ಕೋರ್ಟ್ವರೆಗೆ ಹೋದರೂ ಕೋರ್ಟ್ ಸಂವಿಧಾನವನ್ನು ಎತ್ತಿ ಹಿಡಿದಿದೆ.
ಹಾಗಾಗಿ, ಇದರಲ್ಲಿ ಯಾರೂ ಯಾರಿಗೂ ಹೆದರಬೇಕಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಅವರವರ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಪ್ರತಿ ಮನೆಗೇ ಹೋಗಿ ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಯಾರ ಒತ್ತಡಕ್ಕೂ ಒಳಗಾಗಬೇಕಿಲ್ಲ ಎಂದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ತೊಡಗಿದ ಸಿಬ್ಬಂದಿ ನಿತ್ಯವೂ ತಮಗೆ ಸಾಧ್ಯವಾದಷ್ಟು ಮನೆಗಳನ್ನು ಭೇಟಿ ಮಾಡಿ, ಪಾರದರ್ಶಕವಾಗಿ ಮಾಹಿತಿ ಪಡೆದು ಪರಿಷ್ಕರಿಸಲಿ.
ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಿಲ್ಲ. ಕಾಲಮಿತಿ ಕಡಿಮೆ ಎನಿಸಿದರೆ ಚುನಾವಣೆ ಆಯೋಗ ಹೆಚ್ಚಿನ ಸಮಯ ಸಹ ನೀಡಬಹುದು ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಮತಪಟ್ಟಿಯಲ್ಲಿ ಯಾವುದೇ ನಿರ್ದಿಷ್ಟ ವರ್ಗದ ಹೆಸರು ತೆಗೆಯಲು ಅಥವಾ ಸೇರಿಸಲು ನಿರ್ದೇಶನ ನೀಡಿಲ್ಲ. ಆದರೆ, ಪ್ರತಿಯೊಬ್ಬ ಮತದಾರರು ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮೃತಪಟ್ಟವರು, ಸ್ಥಳಾಂತರವಾದವರು ಮತ್ತು ಅಕ್ರಮ ವಲಸಿಗರ ಪರಿಷ್ಕರಣೆ ಮಾತ್ರ ಎಸ್ಐಆರ್ ಮೂಲಕ ಆಗಬೇಕಿದೆ. ಹಾಗಾಗಿ, ಯಾವುದೇ ಬಿಎಲ್ಒಗಳು ಮತ್ತು ಎಸ್ಐಆರ್ ಸಿಬ್ಬಂದಿ ಅನಗತ್ಯವಾಗಿ ಅಕ್ರಮದಲ್ಲಿ ತೊಡಗಿಕೊಳ್ಳಬಾರದು ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದರು.
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಇದ್ದರು.