ಹುಬ್ಬಳ್ಳಿ ಶ್ರೀ ಸಿದ್ಧಾರೂಢಮಠದ ಸಭಾಗೃಹದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಡಿ. ಮುಂಗುರವಾಡಿ ಮಾತನಾಡಿದರು. ವೈಸ್ ಚೇರ್‌ಮನ್ ವಿನಾಯಕ ಎ. ಘೋಡಕೆ, ವಿ.ವಿ. ಮಲ್ಲಾಪುರ, ಡಾ. ಗೋವಿಂದ ಮಣ್ಣೂರ, ಬಸವರಾಜ ಕಲ್ಯಾಣಶೆಟ್ಟರ, ಬಾಳು ಮಗಜಿಕೊಂಡಿ, ಗೀತಾ ಕಲಬುರ್ಗಿ, ಉದಯಕುಮಾರ ನಾಯ್ಕ ಇದ್ದರು.  
ಧಾರವಾಡ

ಶ್ರೀ ಸಿದ್ಧಾರೂಢಸ್ವಾಮಿ ರಥೋತ್ಸವ 16ರಂದು siddharudha

ಪ್ರಮುಖ ಮುಖ್ಯಾಂಶಗಳು

  • ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗುರವಾಡಿ ಮಾಹಿತಿ
  • 10ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭ
  • 18ರಂದು ಕೌದಿ ಪೂಜೆಯೊಂದಿಗೆ ಉತ್ಸವ ಸಂಪನ್ನ
  • ಸಿದ್ಧಾರೂಢರು ಆರಂಭಿಸಿದ ಶಿವರಾತ್ರಿ ಉತ್ಸವಕ್ಕೀಗ 124 ವರ್ಷ
  • ಅಂದಾಜು 8 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ
ಹುಬ್ಬಳ್ಳಿ: ಶಿವನ ಅವತಾರಿಯಾದ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಗಳು ಪ್ರಾರಂಭಿಸಿದ ಶಿವರಾತ್ರಿ ಉತ್ಸವ 123 ವರ್ಷ ಪೂರೈಸಿದ್ದು, 124ನೇ  ಶಿವರಾತ್ರಿ ಉತ್ಸವ ಫೆ. 10ರಿಂದ ಆರಂಭಗೊಂಡು ಫೆ. 18ರಂದು ಸಂಪನ್ನಗೊಳ್ಳಲಿದೆ ಎಂದು ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗುರವಾಡಿ ಹೇಳಿದರು.
ಶ್ರೀ ಸಿದ್ಧಾರೂಢಮಠದ ಸಭಾಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆ. 15ರಂದು ಶ್ರೀಗಳವರ ಪಾಲಕಿ ನಗರದಲ್ಲಿ ಸಂಚರಿಸಿ ರಾತ್ರಿ ಶ್ರೀಮಠಕ್ಕೆ ಬಂದ ನಂತರ ಅಹೋರಾತ್ರಿ ಜಾಗರಣೆ ನಡೆಯಲಿದೆ. 16ರಂದು ಪಾಲಕಿ ಊರಿನಲ್ಲಿ ಸಂಚರಿಸಿ ಬಂದ ನಂತರ ಸಂಜೆ 5.30ಕ್ಕೆ ಶ್ರೀ ಸಿದ್ಧಾರೂಢಸ್ವಾಮಿ ರಥೋತ್ಸವ ಜರುಗಲಿದ್ದು, ಶ್ರೀಮಠದ ಮುಖ್ಯ ಆಡಳಿತಾಧಿಕಾರಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಮತ್ತು ಕಮೀಟಿ ಚೇರಮನ್‌ರು ಚಾಲನೆ ನೀಡುವರು. 17ರಂದು ಶಿವರಾತ್ರಿ ಅಮಾವಾಸ್ಯೆಯಂದು ಬೆಳಗ್ಗೆ 5 ಗಂಟೆಗೆ ಶ್ರೀ ಸಿದ್ಧಾರೂಢರ ಮೂರ್ತಿಗೆ ಭಸ್ಮ ಸ್ನಾನ. ಫೆ. 18ರಂದು ಸಂಜೆ 6ಕ್ಕೆ ಕೌದಿ ಪೂಜೆ ನೆರವೇರಿದ ನಂತರ ಉತ್ಸವ ಸಂಪನ್ನವಾಗಲಿದೆ ಎಂದರು.
ಲಕ್ಷ ಸೆಟ್ ದೋಸೆ ಪ್ರಸಾದ:  
ಕೈಲಾಸ ಮಂಟಪದ ಹಿಂಭಾಗದಲ್ಲಿ ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಮತ್ತು ಭಕ್ತ ಮಂಡಳಿಯಿಂದ ಭಕ್ತರಿಗೆ ಫೆ. 15ರಂದು ಬೆಳಗ್ಗೆ 10ರಿಂದ ರಾತ್ರಿ 12ರವರೆಗೆ 1 ಲಕ್ಷ ಸೆಟ್ ದೋಸೆ, 11 ಕ್ವಿಂಟಾಲ್ ಗುಲಾಬ್ ಜಾಮೂನ್, 40 ಸಾವಿರ ಚಿಕ್ಕು ಹಣ್ಣುಗಳನ್ನು ವಿತರಿಸಲಾಗುವುದು. 16ರಂದು ಬೆಳಗ್ಗೆ 6ರಿಂದ 10ರವರೆಗೆ 6 ಕ್ವಿಂಟಾಲ್ ಉಪ್ಪಿಟ್ಟು ಪ್ರಸಾದ, ಬೆಳ್ಗಗೆ 10 ರಿಂದ ರಾತ್ರಿ 12ರವರೆಗೆ 10 ಕ್ವಿಂ. ಗೋದಿ ಹುಗ್ಗಿ, 25 ಕ್ವಿಂ. ಅನ್ನ, ಸಾಂಬಾರು ವಿತರಿಸಲಾಗುವುದು. ನಿತ್ಯ ಶ್ರೀಮಠದ ದಾಸೋಹಕ್ಕೆ ಬೇಕಾಗುವ ಕಾಯಿ ಪಲ್ಲೆ ಅರ್ಧದಷ್ಟನ್ನು ಎಪಿಎಂಸಿ ವರ್ತಕರು ದೇಣಿಗೆಯಾಗಿ ನೀಡುತ್ತಿದ್ದಾರೆ. ಭದ್ರತೆ ದೃಷ್ಟಿಯಿಂದ ಮಠದ ಮಹಾದ್ವಾರದಿಂದ ಮಠದವರೆಗೆ ಹಾಗೂ ಸುತ್ತಮುತ್ತ 175 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಬಾರಿ ಜಾತ್ರೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ಅಂದಾಜು 8 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಚೇರಮನ್ ಮುಂಗರವಾಡಿ ತಿಳಿಸಿದರು.  
ವೈಸ್ ಚೇರ್‌ಮನ್ ವಿನಾಯಕ ಎ. ಘೋಡಕೆ, ವಿ.ವಿ. ಮಲ್ಲಾಪುರ, ಡಾ. ಗೋವಿಂದ ಮಣ್ಣೂರ, ಬಸವರಾಜ ಕಲ್ಯಾಣಶೆಟ್ಟರ, ಬಾಳು ಮಗಜಿಕೊಂಡಿ, ಗೀತಾ ಕಲಬುರ್ಗಿ, ಉದಯಕುಮಾರ ನಾಯ್ಕ ಇದ್ದರು.
ಪ್ರವಚನ, ಸಂಗೀತ ಕಾರ್ಯಕ್ರಮ:
ಫೆ. 10ರಿಂದ 15ರವರೆಗೆ ನಿತ್ಯಬೆಳಗ್ಗೆ 7.45ಕ್ಕೆ ಪುರಾಣ ಪಠಣ, 9ರಿಂದ ಮಹಾತ್ಮರು, ಪಂಡಿತರಿಂದ ವೇದಾಂತ ಉಪನ್ಯಾಸ ನಡೆಯಲಿವೆ. ರಾತ್ರಿ 8 ಗಂಟೆಗೆ ಪ್ರಸಿದ್ಧ ಸಂಗೀತಗಾರರಿಂದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಶ್ರೀಮಠದಲ್ಲಿ ಫೆ. 15ರಂದು ರಾತ್ರಿ 11ಕ್ಕೆ ಶ್ರೀ ಮನ್ ನಿಜಗುಣ ಶಿವಯೋಗಿಗಳ ನಾಟಕ ಪ್ರದರ್ಶನವಿದೆ. 
ಬರಲಿದೆ ಚಲನಚಿತ್ರ 
ಶ್ರೀ ಸಿದ್ಧಾರೂಢಸ್ವಾಮಿಗಳ ಜೀವನ ಆಧಾರಿತ ಚಲನಚಿತ್ರ ನಿರ್ಮಿಸುವ ಯೋಜನೆ ಇದ್ದು, ನಿರ್ದೇಶಕ ಗಿರೀಶ ಕಾಸರವಳ್ಳಿ ಶೀಘ್ರದಲ್ಲಿ ಶ್ರೀಮಠಕ್ಕೆ ಭೇಟಿ ನೀಡಲಿದ್ದಾರೆ. ಮಠದ ಭಕ್ತ, ಉದ್ಯಮಿ ವಿಎಸ್‌ವಿ ಪ್ರಸಾದ ನಿರ್ಮಾಣದ ಖರ್ಚು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಡಾ. ಗೋವಿಂದ ಮಣ್ಣೂರ ತಿಳಿಸಿದರು.