Siddarudh ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಶುಕ್ರವಾರ ಸಂಜೆ ಆರೂಢ ಆರತಿಯು ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ ಜರುಗಿತು 
ಧಾರವಾಡ

Siddarudh ಭಕ್ತಿಯ ಹೊಳೆ ಹರಿಸಿದ ಆರೂಢ ಆರತಿ

ಪ್ರಮುಖ ಮುಖ್ಯಾಂಶಗಳು

  • ಸಾವಿರಾರು ಭಕ್ತರ ಜಯಘೋಷ
  • ಗಂಗಾ ಆರತಿ ಮಾದರಿಯಲ್ಲಿ ಆಯೋಜನೆ
  • ಪ್ರತಿ ಅಮಾವಾಸ್ಯೆಗೂ ನಡೆಯಲಿದೆ
ಹುಬ್ಬಳ್ಳಿ: Siddarudh ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಆವರಣವು ಶುಕ್ರವಾರ ಎಳ್ಳ ಅಮಾವಾಸ್ಯೆಯಂದು ಆಯೋಜಿಸಿದ್ದ ಧಾರ್ಮಿಕ ಆಚರಣೆಯ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಭಕ್ತಿಯ ಹೊಳೆ ಹರಿಸಿತು.
ಇದೇ ಮೊದಲ ಬಾರಿ ಗಂಗಾದೇವಿಯ ಆರಾಧನೆ ಮಾಡುತ್ತ ಗಂಗಾ ಆರತಿ ಮಾದರಿಯಲ್ಲಿ ಆರೂಢ ಆರತಿ ಬೆಳಗುವ ಮೂಲಕ ವಿಶಿಷ್ಟ ಆಚರಣೆಗೆ ಮುನ್ನುಡಿ ಬರೆಯಲಾಯಿತು.
ಶ್ರೀಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಏರ್ಪಡಿಸಿದ್ದ ಸಂಭ್ರಮದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ "ಆರೂಢ ಆರತಿ' ಬೆಳಗಲಾಯಿತು.
ಪುಷ್ಕರಣಿಯ ಒಂದು ಬದಿಯಲ್ಲಿ ವೇದಿಕೆ ನಿರ್ಮಿಸಿ ಆರತಿಗಾಗಿ ಸಕಲ ಸಿದ್ಧತೆ ಮಾಡಿಕೊಂಡು ಶಂಕನಾದ, ಓಂಕಾರಗಳೊಂದಿಗೆ ಆರಂಭಿಸಿ ಸುಮಾರು ಅರ್ಧ ತಾಸು ಆರತಿ ಮಾಡಲಾಯಿತು.
ಪುಷ್ಕರಣಿ ಮಧ್ಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಸಿದ್ಧಾರೂಢರು, ಶ್ರೀ ಗುರುನಾಥರೂಢ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು.
ಪ್ರತಿ ಅಮಾವಾಸ್ಯೆ ಸಂಜೆ ಆರೂಢ ಆರತಿ ನೆರವೇರಿಸಲು ಶ್ರೀಮಠದ ಟ್ರಸ್ಟ್​ ಕಮಿಟಿ ನಿರ್ಧರಿಸಿದ್ದು, ಇದಕ್ಕಾಗಿ 15 ಜನರ ತಂಡಕ್ಕೆ ತರಬೇತಿ ನೀಡಲಾಗಿದೆ. ಮೊದಲ ಆರತಿ ಕಾರ್ಯಕ್ರಮಕ್ಕೆ ಕಿಕ್ಕಿರಿದು ಭಕ್ತರು ಸೇರಿದ್ದರು.
ಇದಕ್ಕೂ ಮೊದಲು ಶ್ರೀಮಠದ ಆಡಳಿತಾಧಿಕಾರಿ ಮತ್ತು ಧಾರವಾಡ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಬಿ.ಎಸ್​. ಭಾರತಿ ಅವರು ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಅಭಿನವ ಶ್ರೀ ಸಿದ್ಧಾರೂಢಸ್ವಾಮೀಜಿ, ಪಂಡರಪುರದ ಶ್ರೀ ಯಶವಂತ ಭುವಾ ಭೋದಲೆ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಟ್ರಸ್ಟ್​ ಕಮಿಟಿ ಚೇರ್ಮನ್​ ಚನ್ನವಿರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು.