school sheet ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಶಾಲೆ ಶೀಟ್ ಹಾರಿ ಹೋಗಿರುವುದು.
- ಬಂಡಿವಾಡ ಶಾಲೆಯಲ್ಲಿ ಘಟನೆ
- 200ಕ್ಕೂ ಹೆಚ್ಚು ಮಕ್ಕಳು ಪಾರು
ಹುಬ್ಬಳ್ಳಿ: school sheet ತಾಲೂಕಿನ ಬಂಡಿವಾಡ ಗ್ರಾಮದ ಸರ್ಕಾರಿ ಶಾಲೆ ಮಕ್ಕಳ ಅದೃಷ್ಟ ಚೆನ್ನಾಗಿತ್ತು. ಸಂಜೆ ಶಾಲೆ ಬಿಟ್ಟು ಕೆಲವೇ ನಿಮಿಷಗಳಲ್ಲಿ ಭಾರಿ ಬಿರುಗಾಳಿ ಬೀಸಿದ್ದರಿಂದ ಕೊಠಡಿಗಳ ಶೀಟ್ ಹಾರಿ ಹೋಗಿ ಭಾರಿ ಅನಾಹುತವೊಂದು ತಪ್ಪಿದೆ.
ಸೋಮವಾರ ಸಂಜೆ ಬೀಸಿದ ಭಾರಿ ಬಿರುಗಾಳಿ ಹಾಗೂ ಮಳೆಗೆ ಇಡೀ ಗ್ರಾಮವೇ ನಲುಗಿದೆ. ಗ್ರಾಮದ ಸರ್ಕಾರಿ ಶಾಲೆಯ ಆರು ಕೊಠಡಿಗಳ ಶೀಟ್ಗಳು ಹಾರಿ ಹೋಗಿವೆ. ಗಾಳಿಯ ರಭಸ ಎಷ್ಟಿತ್ತೆಂದರೆ ಕೊಠಡಿಯ ಶೀಟ್ಗಳು ಸುಮಾರು 300 ಮೀಟರ್ ವರೆಗೂ ಹಾರಿ ಹೋಗಿವೆ ಎನ್ನಲಾಗಿದೆ.
ಶಾಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿವೆ. ಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗ ಇಂತಹ ಘಟನೆ ಸಂಭವಿಸಿದ್ದರೆ ಎಂತಹ ಅವಘಡವಾಗುತ್ತಿತ್ತು ಎಂದು ಪಾಲಕರು ಆತಂಕ ಹೊರ ಹಾಕಿದ್ದಾರೆ.
ಏಕಾಏಕಿ ಬೀಸಿದ ಬಿರುಗಾಳಿಗೆ ಶಾಲೆಯ ಶೀಟ್ಗಳು ನೂರಾರು ಮೀಟರ್ವರೆಗೆ ಹಾರಿ ಹೋಗಿವೆ. ಶಾಲೆ ಸಮಯ ಮುಗಿದ ನಂತರ ಘಟನೆ ನಡೆದಿರುವುದರಿಂದ ನಮ್ಮೂರ ಶಾಲೆ ಮಕ್ಕಳು ಸುರಕ್ಷಿತವಾಗಿದ್ದಾರೆ. ಗ್ರಾಮದ ಕೆಲ ಮನೆಗಳಿಗೂ ಮಳೆ, ಗಾಳಿಯಿಂದ ಧಕ್ಕೆಯಾಗಿದೆ ಗ್ರಾಮದ ಸಿದ್ದರಾಮಯ್ಯ ಹಿರೇಮಠ ತಿಳಿಸಿದರು.
ಘಟನೆ ನಂತರ ಮಂಗಳವಾರ ಬೆಳಗ್ಗೆ ಅನೇಕ ಪಾಲಕರು ಶಾಲೆಗೆ ಆಗಮಿಸಿ ಶಿಕ್ಷಕರನ್ನು ವಿಚಾರಿಸಿದ್ದಾರೆ. ಶಾಲೆಯ ಸ್ಥಿತಿಗತಿ ನೋಡಿ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಶಾಲೆಯ ಆರು ಹಳೇ ಕಟ್ಟಡದ ಕೊಠಡಿಗಳಿಗೆ ದುರಸ್ತಿ ಮಾಡಿ ಕೆಲ ವರ್ಷದ ಹಿಂದೆ ಶೀಟ್ ಅಳವಡಿಸಲಾಗಿತ್ತು. ದುರಸ್ತಿ ಕೈಗೊಂಡ ಕೊಠಡಿಗಳ ಶೀಟ್ಗಳೇ ಇದೀಗ ಹಾರಿ ಹೋಗಿವೆ.
ಶಾಲೆಯಲ್ಲಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
"
ಬಂಡಿವಾಡ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಹಳೆಯ ಆರು ಕೊಠಡಿಗಳ ಶೀಟ್ಗಳು ಬಿರುಗಾಳಿಗೆ ಹಾರಿಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸದ್ಯಕ್ಕೆ ಮಕ್ಕಳನ್ನು ಆ ಕೊಠಡಿಗಳಲ್ಲಿ ಕುಳಿತುಕೊಳ್ಳಲು ಬಿಟ್ಟಿಲ್ಲ. ಬೇರೆ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೊಠಡಿ ನಿಮಿರ್ಸಿದವರ ಮೇಲೆ ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.
— ಉಮೇಶ ಬೊಮ್ಕಕನವರ, ಡಿಡಿಪಿಐ, ಧಾರವಾಡ