ಹುಬ್ಬಳ್ಳಿಯ saraswat chamber ಜಿಎಸ್‌ಬಿ ಸಮಾಜದ ಆರ್‌ಪಿಕೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎಂಎಸ್‌ಎಂಇ, ಸ್ಟಾರ್ಟ್‌ಅಪ್ ಸಮಾವೇಶವನ್ನು ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಉದ್ಘಾಟಿಸಿದರು.
ಹುಬ್ಬಳ್ಳಿ: ಉದ್ಯೋಗಕ್ಕಾಗಿ ಹಾತೊರೆಯುವುದಕ್ಕಿಂತ saraswat chamber ಉದ್ಯೋಗದಾತರಾಗುವಂತೆ ಬೆಳೆಯಬೇಕು. ನವೋದ್ಯಮಿಗಳು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದರಿಂದ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಸಾಧ್ಯ ಎಂದು ಮಕ್ಕಳ ತಜ್ಞ ಡಾ. ರಾಜನ್ ದೇಶಪಾಂಡೆ ಅಭಿಪ್ರಾಯಪಟ್ಟರು.
ಗ್ಲೋಬಲ್ ಚೇಂಬರ್ ಆಫ್ ಸಾರಸ್ವತ ಎಂಟರ್‌ಪ್ರೀನರ್ ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ಇಲ್ಲಿಯ ಜೆ.ಸಿ. ನಗರದ ಜಿಎಸ್‌ಬಿ ಸಮಾಜದ ಆರ್‌ಪಿಕೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎಂಎಸ್‌ಎಂಇ, ಸ್ಟಾರ್ಟ್‌ಅಪ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ನವೋದ್ಯಮ ಆರಂಭಿಸುವ ಯುವಕರಿಗೆ ಪ್ರೋತ್ಸಾಹ ನೀಡಬೇಕಿದೆ. ಏಳು ಬೀಳು ಇದ್ದಾಗ ಮಾತ್ರ ಬೆಳವಣಿಗೆ ಸಾಧ್ಯ. ಸುರಕ್ಷಿತ ವಲಯದಿಂದ ಹೊರಬರಬೇಕು. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರಲ್ಲದೆ, ಬೇರೆ ಸಮುದಾಯಗಳು ಒಂದಾಗಿದ್ದರಿಂದ, ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. 15ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಒಂದಾಗಬೇಕು. ಆಗ ಮಾತ್ರ ರಾಜಕೀಯ ಸ್ಥಾನಮಾನ ಸೇರಿ ಇತರ ಸೌಲಭ್ಯ ದೊರೆಯಲು ಸಾಧ್ಯ ಎಂದರು.
ಉದ್ಯಮಿ ಅನೂಪ್ ಪೈ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಅವಕಾಶಗಳಿವೆ. ಹೊಸ ಆಲೋಚನೆಗಳೊಂದಿಗೆ ನವೋದ್ಯಮ ಆರಂಭಿಸಬೇಕು. ಇದಕ್ಕೆ ತಕ್ಕುದಾದ ಮಾರ್ಗದರ್ಶನ ತಾನಾಗಿಯೇ ಒಲಿದು ಬರಲಿದೆ. ಆದರೆ, ಹೆಜ್ಜೆ ಮುಂದಿಡುವ ಮನಸ್ಸು ಮಾಡಬೇಕು ಎಂದರು.
ಉದ್ಯಮಿ ಉಲ್ಲಾಸ ಕಾಮತ್ ಮಾತನಾಡಿ, ಉದ್ಯೋಗ ಪಡೆಯುವುದೊಂದೇ ಶಿಕ್ಷಣದ ಗುರಿಯಾಗಬಾರದು. ರಾಜ್ಯದಲ್ಲಿ ಪ್ರತಿ ವರ್ಷ 21 ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಈ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಉದ್ಯೋಗದ ಬದಲು ಉದ್ಯೋಗ ಕೊಡುವಂತಾಗಲು ಹೆಜ್ಜೆ ಇಡಬೇಕು ಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಉದ್ಯೋಗ ಸೃಷ್ಟಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ. ಎಂಎಸ್‌ಎಂಇ ಯಿಂದ ದೇಶದಲ್ಲಿ 23 ಕೋಟಿಗೂ ಉದ್ಯೋಗಗಳು ಸೃಷ್ಟಿಯಾಗಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಎಂಎಸ್‌ಎಂಇ ಇಲಾಖೆ ಇದ್ದು, ಅವುಗಳ ಮಾರ್ಗದರ್ಶನ ಪಡೆಯಬೇಕು ಎಂದರು.
ಲೆಕ್ಕ ಪರಿಶೋಧಕಿ ಪ್ರತೀಕ್ಷಾ ಪೈ ಪ್ರಾಸ್ತಾವಿಕವಾಗಿ ಮಾತನಾಡಿ, ಕುಟುಂಬದ ಉದ್ಯಮ ನೆಚ್ಚಿ ಬಹಳಷ್ಟು ಜನರು ಮುಂದೆ ಹೋಗುತ್ತಿದ್ದಾರೆ. ಕುಟುಂಬದ ಉದ್ಯೋಗದ ಜತೆಗೆ ಹೊಸ ಉದ್ಯಮವನ್ನು ಸೃಷ್ಟಿಸಬೇಕು. ಮಾರುಕಟ್ಟೆಯಲ್ಲಿ ಪೂರಕ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲಭ್ಯವಿರುವ ಸಾಲ ಸೌಲಭ್ಯ, ಹಣಕಾಸು ನೆರವು ಮತ್ತು ಉದ್ಯಮ ಬೆಂಬಲ ಕಾರ್ಯಕ್ರಮಗಳ ಕುರಿತು ಮಾಹಿತಿ ಒದಗಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉದ್ಯಮಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉದ್ಯಮಿಗಳಾದ ರಮೇಶ ಪಿ. ನಾಯಕ, ಪ್ರಮೋದ ಕಾಮತ್, ಸದಾನಂದ ಕಾಮತ್, ಆರ್.ಎಸ್. ಶಾನಭಾಗ, ಸುಹಾಸ ಪ್ರಭು, ಸಂಕೇತ ನಾಯಕ್, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರಾದ ಸಮೀರ್‌ಅಲಿ ಶೇಖ್, ಈರಣ್ಣ ನಾಗರಾಳ, ಶರಣಬಸವ, ಇತರರಿದ್ದರು.