ಅಳಿದುಳಿದ ಬೆಳೆ ನೀರಿಕ್ಷೆಯಲ್ಲಿ ಎಡೆಕುಂಟಿ ಹೊಡೆಯುತ್ತಿರುವ ರೈತ.
ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಕೊರತೆಯಿಂದ ಕೃಷಿ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅದರ ನೇರ ಪರಿಣಾಮ ಜಿಲ್ಲೆಯ ಆಥಿರ್ಕ ಚಟುವಟಿಕೆಗಳ ಮೇಲೂ ಬೀಳುವ ಆತಂಕ ಎದುರಾಗಿದೆ.
ಕೃಷಿ ಪ್ರಧಾನ ಜಿಲ್ಲೆ ಧಾರವಾಡದಲ್ಲಿ ರೈತರ ಆದಾಯ ಕುಸಿದಂತೆ ಮಾರುಕಟ್ಟೆಯ ವಹಿವಾಟೂ ಮಂದಗತಿಯಲ್ಲಿ ಸಾಗಿರುವುದು ಕಂಡು ಬರುತ್ತಿದೆ. ರೈತರು ಬೆಳೆದ ಬೆಳೆ ಉತ್ತಮ ಬೆಲೆಗೆ ಮಾರಾಟವಾಗಿ ಕೈಗೆ ಹಣ ಬಂದಾಗ ಮಾತ್ರ ವ್ಯಾಪಾರ-&ವಹಿವಾಟಿಗೂ ಚೈತನ್ಯ ಮೂಡುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆ, ಹವಾಮಾನ ವೈಪರೀತ್ಯ ಮತ್ತು ಬೆಳೆಗೆ ರೋಗ ತಗುಲುವುದರಿಂದ ಕೃಷಿ ಲಾಭದಾಯಕತೆ ಕುಸಿಯುತ್ತಿದೆ. ಪರಿಣಾಮವಾಗಿ ಅನೇಕ ರೈತರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಯುವಜನತೆ ಉದ್ಯೋಗದತ್ತ ಮುಖ ಮಾಡುತ್ತಿದ್ದು, ಕೃಷಿ ಮಾಡಲು ಜನರ ಕೊರತೆಯಿಂದ ಜಮೀನುಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರ ನಡುವೆಯೇ ಜಿಲ್ಲಾದ್ಯಂತ ರಿಯಲ್ ಎಸ್ಟೇಟ್ ಚಟುವಟಿಕೆಗಳು ವಿಸ್ತರಿಸಿಕೊಂಡು, ಕೃಷಿ ಭೂಮಿಗಳು ಬಡಾವಣೆಗಳಾಗಿ ಪರಿವರ್ತನೆಯಾಗಿವೆ.
ಕೇವಲ ಕೃಷಿ ಮಾತ್ರವಲ್ಲ, ವಾಹನ, ಚಿನ್ನ-&ಬೆಳ್ಳಿ, ಬಟ್ಟೆ, ಹೋಟೆಲ್, ಹೂ-&ಹಣ್ಣು, ತರಕಾರಿ ಹಾಗೂ ಮದುವೆ ಸಮಾರಂಭಗಳಿಗೆ ಸಂಬಂಧಿಸಿದ ವ್ಯಾಪಾರಗಳ ಮೇಲೂ ಕೃಷಿ ಆದಾಯದ ನೇರ ಪ್ರಭಾವವಿದೆ. ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಈ ಎಲ್ಲ ಕ್ಷೇತ್ರಗಳ ಮೇಲೂ ಪ್ರತಿಕೂಲ ಪರಿಣಾಮ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಒಟ್ಟಾರೆ ಜಿಲ್ಲೆಯ ಮಾರುಕಟ್ಟೆ ವಲಯದಲ್ಲಿ ಮಂದಗತಿಯ ನಿರ್ಮಾಣವಾಗಿದೆ.
ಗೆದ್ದರೆ ಕುಬೇರ, ಸೋತರೆ ಸಾಲಗಾರ ಎಂಬ ನಾಣ್ಣುಡಿಯಂತೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಅನೇಕ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಕೃಷಿ ಆದಾಯವನ್ನೇ ನಂಬಿದ್ದ ರೈತರು ಮಕ್ಕಳ ಉನ್ನತ ಶಿಕ್ಷಣದ ವೆಚ್ಚ ಭರಿಸುವ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಇಂಜಿನಿಯರಿಂಗ್, ವೈದ್ಯಕಿಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಲಕ್ಷಾಂತರ ರೂ. ವೆಚ್ಚಮಾಡಿ ಮಕ್ಕಳನ್ನು ಓದಿಸಬೇಕೆಂಬ ಕನಸು ಕಂಡಿದ್ದ ಕುಟುಂಬಗಳು ಈಗ ಆಥಿರ್ಕ ಅನಿಶ್ಚಿತತೆ ಎದುರಿಸುತ್ತಿವೆ.
ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ ಜೂನ್ 1ರಿಂದ ಜುಲೈ 17ರವರೆಗೆ ವಾಡಿಕೆ ಮಳೆ 209.0 ಮೀ.ಮೀ ಆಗಬೇಕಾಗಿತ್ತು. ವಾಸ್ತವಿಕವಾಗಿ 142.3 ಮೀ.ಮೀ. ಮಳೆಯಾಗಿದ್ದು, ಶೇ. 32ರಷ್ಟು ಮಳೆ ಪ್ರಮಾಣ ಕೊರತೆಯಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳುತ್ತದೆ. ಆದರೆ, ಕೆಲವೇ ಪ್ರದೇಶ ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಸಮಪರ್ಕವಾಗಿ ಮಳೆಯಾಗಿಲ್ಲ ಎಂದು ರೈತರ ವಾದ. ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಗೋವಿನ ಜೋಳ, ಭತ್ತ, ಸೊಯಾಬಿನ್ ಬೆಳೆ ನೆಲಕಚ್ಚಿದೆ. ನವಲಗುಂದ ಕೆಲವೊಂದು ಪ್ರದೇಶದಲ್ಲಿ ಹಾಳಾದ ಬೆಳೆಯನ್ನು ಕಿತ್ತು ಎಸೆದಿದ್ದಾರೆ. ಜಿಲ್ಲೆಯ ಬಯಲು ಸೀಮೆಯ ಸಾವಿರಾರು ಎಕರೆ ಬೆಳೆ ಹಾಳಾಗಿದೆ. ಮೊದಲು ಧಾರವಾಡ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಸರ್ಕಾರ ಘೋಷಿಸಬೇಕು. ಸೊಸೈಟಿಗಳಲ್ಲಿ ಅಷ್ಟೇ ಅಲ್ಲ, ರಾಷ್ಟ್ರೀಕೃತ ಬ್ಯಾಂಕ್ನಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
"
ಕೃಷಿಯೇ ರೈತರ ಜೀವಾಳ. ಆದರೆ, ಮಳೆ ಇಲ್ಲ, ಬೆಳೆದ ಬೆಳೆಯೂ ಕೈ ಕೊಟ್ಟಿದೆ. ರೈತರ ಕೈಯಲ್ಲಿ ಹಣವಿಲ್ಲದ ಕಾರಣ ಯಾವುದೇ ವ್ಯಾಪಾರ-&ವಹಿವಾಟು ಸುಗಮವಾಗಿ ನಡೆಯುತ್ತಿಲ್ಲ. ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಇದು ಎಲ್ಲದರ ಮೇಲೂ ಪರಿಣಾಮ ಬೀರುತ್ತಿದೆ. ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ.
— ನಾಗಪ್ಪ ಉಂಡಿ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ