yogini ಉತ್ತರಪ್ರದೇಶದ ವಾರಾಣಸಿಯ ವೀರಶೈವ ಧರ್ಮದ ಕಾಶಿ ಜ್ಞಾನ ಪೀಠದಲ್ಲಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ರಷ್ಯಾದ ಹಠಯೋಗಿಣಿ ಮೋಲ್ಗಾ ಅವರಿಗೆ ಶ್ರಾವಣ ಸೋಮವಾರದಂದು ಶಿವಯೋಗ ದೀಕ್ಷೆ ನೀಡಿದರು.
- ಶಿವನಾಗಲು ಬೆಳಕು ತುಂಬುವ ಶಿವಯೋಗ
- ಅನುಭಾವದ ತನ್ಮಯತೆಯ ಪಯಣವೇ ಶಿವಯೋಗವಾಗಿದೆ
- ಹಠಯೋಗಿಣಿ ಮೋಲ್ಗಾ ಅವರಿಗೆ ಹಠಯೋಗಿಣಿ ಮಾನಸಿದೇವಿ ಎಂದು ಮರು ನಾಮಕರಣ
ಉತ್ತರಪ್ರದೇಶದ ವಾರಾಣಸಿಯ ವೀರಶೈವ ಧರ್ಮದ ಜ್ಞಾನ ಪೀಠದಲ್ಲಿ ರಷ್ಯಾದ ಪ್ರಸಿದ್ಧ ಹಠಯೋಗಿಣಿ ಮೋಲ್ಗಾ ಅವರಿಗೆ ಶ್ರಾವಣ ಸೋಮವಾರದಂದು ಶಿವಯೋಗ ದೀಕ್ಷೆ ನೀಡಿ, ಅವರು ಆಶೀರ್ವಚನ ನೀಡಿದರು.
ಶಿವಯೋಗವು ಅನನ್ಯ ಭಕ್ತಿಯ ಶಿವನಾಮಸ್ಮರಣೆಯ ನಿತ್ಯದ ಅನುಸಂಧಾನದಲ್ಲಿ ಬಾಹ್ಯ ಆಚರಣೆೆಯನ್ನು ಆಂತರಿಕ ಅನುಭಾವವಾಗಿ ಪರಿವರ್ತಿಸುವ ಮಹಾಸಾಧನವಾಗಿದೆ ಎಂದರು.
ಜೀವಾತ್ಮನು ತನ್ನ ನಿಜಸ್ವರೂಪವನ್ನು ಅರಿತುಕೊಂಡು ಪರಮಶಿವನ ಪವಿತ್ರ ಸಾನ್ನಿಧ್ಯದೊಂದಿಗೆ ಐಕ್ಯತೆಯ ಅನುಭೂತಿಯನ್ನು ಸಂಪಾದಿಸುವ ಸರ್ವ ಶ್ರೇಷ್ಠ ಸಾಧನಾ ಪಥ ಎಂದು ತಿಳಿಸಿದರು.
ಎಲ್ಲ ಚಂಚಲತೆ, ಮಮಕಾರ, ದೇಹದ ವ್ಯಾಮೋಹದ ಭಾವನೆಗಳು ಕರಗಿ ಶಿವಭಾವದ ಮೇರು ಸ್ಥಿತಿಯಲ್ಲಿ ಮಹಾಬೆಳಕನರಸುವ ಉನ್ನತೋನ್ನತ ಅನುಭಾವದ ತನ್ಮಯತೆಯ ಪಯಣವೇ ಶಿವಯೋಗವಾಗಿದೆ ಎಂದು ಜಗದ್ಗುರುಗಳು ಹೇಳಿದರು.
ಪ್ರಾತಃಕಾ ಲದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಹಠಯೋಗಿಣಿ ಮೋಲ್ಗಾ ಅವರ ತಲೆಯ ಮೇಲೆ ಭಸ್ಮದಿಂದ ಪಂಚಕೋನ ಬರೆದು, ಶಿವಪಂಚಾಕ್ಷರಿ ಮಹಾಮಂತ್ರದ ಪ್ರಣವಗಳನ್ನು ತುಂಬಿ ಶಿವಯೋಗದೀಕ್ಷೆ ನೀಡಿ ಆಶೀರ್ವದಿಸಿದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಭಾರತೀಯ ಪರಂಪರೆಯಂತೆ ಹಠಯೋಗಿಣಿ ಮೋಲ್ಗಾ ಅವರಿಗೆ ಹಠಯೋಗಿಣಿ ಮಾನಸಿದೇವಿ ಎಂದು ಮರು ನಾಮಕರಣ ಮಾಡಿದರು.
ಈ ಸಂದರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡ ಹಠಯೋಗಿಣಿ ಮಾನಸಿದೇವಿ, ಶ್ರೀ ಕಾಶಿ ಜಗದ್ಗುರುಗಳ ತಪೋಹಸ್ತದಿಂದ ಜರುಗಿದ ಈ ಶಿಯೋಗ ದೀಕ್ಷೆಯಿಂದಾಗಿ ನನ್ನ ಹಠಯೋಗ ಸಾಧನಾ ಪಥಕ್ಕೆ ವಿಶಿಷ್ಟ ಪ್ರೇರಣೆಯ ಮಹಾಬೆಳಕು ಲಭಿಸಿದೆ ಎಂದರು.
ಮಹಾರಾಷ್ಟ್ರ ವಸಂತ ನಗರದ ಶ್ರೀ ದಿಗಂಬರ ಶಿವಾಚಾರ್ಯಸ್ವಾಮೀಜಿ, ಕಳಮನೂರಿನ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸೇರಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ಮತ್ತು ಉತ್ತರಪ್ರದೇಶದ ಭಕ್ತರು ಪಾಲ್ಗೊಂಡಿದ್ದರು.