ಹುಬ್ಬಳ್ಳಿ: ಜೀವನದ ಸವಾಲುಗಳನ್ನು ಎದುರಿಸಲು ಹಾಗೂ ಬದುಕಿನ ನೋವು, ಸಂತೋಷ ಎರಡನ್ನೂ ವ್ಯಕ್ತಪಡಿಸಲು ಕಾವ್ಯವು ಒಂದು ಉತ್ತಮ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಉಮಾದೇವಿ ಸುರಪುರ ಅವರು ರಚಿಸಿದ 135 ಕವಿತೆಗಳ ಸಂಕಲನ "ಅಶ್ರು ದರ್ಪಣ'ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೃತಿಯು ಕೇವಲ ಕವಿತೆಗಳ ಸಂಗ್ರಹವಲ್ಲ, ಬದಲಾಗಿ ಒಬ್ಬ ಮಹಿಳೆಯು ಏಕಾಂತ ಮತ್ತು ಸ್ಥಿತಪ್ರಜ್ಞತೆಯ ಮೂಲಕ ಸಾಗಿದ ಭಾವನಾತ್ಮಕ ಪಯಣದ ಹೃದಯಸ್ಪರ್ಶಿ ನಿರೂಪಣೆಯಾಗಿದೆ ಎಂದು ಬಣ್ಣಿಸಿದರು.
ಉಮಾದೇವಿ ಅವರು ಕವಿತೆಗಳ ಮೂಲಕ ತಮ್ಮ ಅಂತರಂಗದ ಆಲೋಚನೆಗಳು, ಜೀವನಾನುಭವಗಳು ಮತ್ತು ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಇವುಗಳಲ್ಲಿ ಅವರು ವರ್ಷಗಳ ಕಾಲ ಗಳಿಸಿದ ಜ್ಞಾನ ಮತ್ತು ಒಳನೋಟಗಳು ಕಂಡು ಬರುತ್ತವೆ ಎಂದು ಸ್ನೇಹಲ್ ಹೇಳಿದರು.
ಉಮಾದೇವಿ ಅವರ ಅಸಾಧಾರಣ ಪಯಣವನ್ನು ಉಲ್ಲೇಖಿಸಿದ ಅವರು, ಧೈರ್ಯ, ಪರಿಶ್ರಮ ಮತ್ತು ದೃಢನಿಶ್ಚಯದ ಮೂಲಕ ಸಾಮಾನ್ಯ ವ್ಯಕ್ತಿಗಳು ಕೂಡ ಅಸಾಧಾರಣ ಕಾರ್ಯಗಳನ್ನು ಮಾಡಬಲ್ಲರು. ಇಂತಹ ಸ್ಥಿತಪ್ರಜ್ಞ ಮಹಿಳೆಯರ ಜೀವನಗಾಥೆಗಳು ಸಮಾಜದ ಇತರ ಮಹಿಳೆಯರಿಗೆ ಸ್ಪೂರ್ತಿದಾಯಕ ಎಂದು ಹೇಳಿದರು.
ಹಣಕಾಸು ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ವಿಶಾಲ್ ರವಿ, ಹೆಸ್ಕಾಂ ಎಂಡಿ ಹೇಮಂತ್, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಮಹಾನಗರ ಪಾಲಿಕೆ ಉಪ ಆಯುಕ್ತೆ ಅನುರಾಧಾ ವಸ್ತ್ರದ ಉಪಸ್ಥಿತರಿದ್ದರು.
ಡಾ. ಸರ್ವಮಂಗಳ, ಡಾ. ವೀರಣ್ಣ ಮುಧೋಳ, ಡಾ. ರಮೇಶ, ಡಾ. ನಿತಿನ್ ಹತ್ತಿಕಾಳ, ಎಸ್ಡಿಎಂ ದಂತ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ, ಡಾ. ಸಮೀರ ದೇಸಾಯಿ, ಡಾ. ವೃಂದಾ, ಡಾ. ವಿದ್ಯಾ, ಡಾ. ಭೂಷಣ ಗ್ರಾಮೋಪಾಧ್ಯ, ಡಾ. ಅಂಬೇಶ್ ಮೋಹಿತೆ ಇತರರು ಪಾಲ್ಗೊಂಡರು.