ಹುಬ್ಬಳ್ಳಿ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಅವರ ಸಂಪುಟದ ಸಚಿವರು ಪೂರ್ವಾನುಮತಿ ಪಡೆಯದೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿರುವುದನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರಣಿ ನಡೆಸಿದ ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾದಲ್ಲಿ ಬಿಜೆಪಿ ಯಾವುದೇ ಪೂರ್ವಾನುಮತಿ ಇಲ್ಲದೇ ಡಿಜಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ನಕಲಿ ಗಾಂಧಿವಾದಿಗಳನ್ನು ತೃಪ್ತಿಪಡಿಸುವ ಉದ್ದೇಶದಿಂದ ಮಾತ್ರ ಪ್ರತಿಭಟನೆಯನ್ನು ಮುಖ್ಯಮಂತ್ರಿ ಮತ್ತು ಅವರ ಸಚಿವರು ನಡೆಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ತೃಪ್ತಿ ಪಡಿಸುವ ಮೂಲಕ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಬೇಕೆಂಬ ಏಕೈಕ ಉದ್ದೇಶ ಡಿ.ಕೆ. ಶಿವಕುಮಾರ ಅವರದ್ದು ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ. ಯಾರಾದರೂ ಪ್ರತಿಭಟನೆ ನಡೆಸಬೇಕೆಂದರೆ ಫ್ರೀಡ್ಂ ಪಾರ್ಕ್ಗೆ ತೆರಳಲು ಸೂಚಿಸಲಾಗುತ್ತದೆ. ಅಂತಹದರಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ಮುಖ್ಯಮಂತ್ರಿ ಚುನಾವಣೆ ಆಯೋಗದ ಎದುರು ಪ್ರತಿಭಟನೆ ನಡೆಸಿದ್ದಾರೆ. ಸಚಿವ ಸಂಪುಟ ಸಭೆ ರದ್ದುಗೊಳಿಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಭಟನೆ ನಡೆಸಿದ್ದು, ಇದು ಇತಿಹಾದಲ್ಲಿಯೇ ಕರಾಳ ದಿನ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ವಿಷಯ ಸರ್ಕಾರಕ್ಕೆ ಹೇಗೆ ತಿಳಿಯಿತು. ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಿಎಲ್ಒ, ತಹಸೀಲ್ದಾರ, ಜಿಲ್ಲಾಧಿಕಾರಿ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡಿದ್ದಾರೆ. ಆದರೂ, ಮತದಾರರ ಪಟ್ಟಿಯಿಂದ ಮುಸ್ಲಿಂರನ್ನು ಕೈಬಿಟ್ಟಿದ್ದಾಗಿ ಹೇಗೆ ಹೇಳುತ್ತಾರೆ ? ಎಂದು ಪ್ರಶ್ನಿಸಿದರು.
ಪಾಕಿಸ್ತಾನ ಹಾಗೂ ಬಾಂಗ್ಲಾದ ಮುಸ್ಲಿರಂನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕುತಂತ್ರ ಕಾಂಗ್ರೆಸ್ನದ್ದು. ವಿದೇಶಿ ಪ್ರಜೆಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.
ರೈತ ವಿರೋಧಿ ಸರ್ಕಾರ : ರಾಜ್ಯ ಕಾಂಗ್ರೆಸ್ ಸರ್ಕಾರ ಬರಗಾಲದ ಇಂದಿನ ಪರಿಸ್ಥಿತಿಯಲ್ಲಿ ಪ್ರತಿ ರೈತ ಕುಟುಂಬಕ್ಕೆ 2,500 ರೂ. ಭಿಕ್ಷೆ ನೀಡಿದೆ. ರೈತರ ಬಗ್ಗೆ ಕಾಳಜಿ ಇಲ್ಲದ ಈ ಸರ್ಕಾರ ರೈತ ವಿರೋಧಿಯಾಗಿದೆ ಎಂದು ಸಚಿವ ಜೋಶಿ ಆರೋಪಿಸಿದರು.
ಕಿಸಾನ್ ಸಮ್ಮಾನ ನಿಧಿಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲು ನೀಡುವುದನ್ನು ನಿಲ್ಲಿಸಿದೆ. ಕೃಷಿ ಪಂಪ್ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಹುಬ್ಬಳ್ಳಿಯಲ್ಲಿ ರೈತರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ನನ್ನ ಬಗ್ಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ಸಹಜ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಅ. 12ರಂದು ದೆಹಲಿಯಲ್ಲಿ ಕರೆದಿರುವ ಸಭೆಯಲ್ಲಿ ಸಂಬಂಧಿಸಿದ ಇನ್ನಿತರ ಸಚಿವರು ಸಹ ಪಾಲ್ಗೊಳ್ಳಲಿದ್ದಾರೆ. ರೈತರೊಂದಿಗೆ ರ್ಚಚಿಸಲಾಗುವುದು. ಸಭೆಯ ನಡಾವಳಿ ಬಗ್ಗೆ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ರ್ಚಚಿಸಿ, ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಬ್ಬಿನ ಎಫ್ಆರ್ಪಿ ದರವನ್ನು ಪ್ರತಿ ವರ್ಷ ಹೆಚ್ಚಿಸಲಾಗುತ್ತದೆ. ಈ ಹಿಂದೆ ರೈತ ಮುಖಂಡ ಶಶಿಕಾಂತ ಗುರೂಜಿ ನೇತೃತ್ವದ ರೈತರ ನಿಯೋಗ ನನ್ನನ್ನು ಭೇಟಿಯಾಗಲು ಬಂದಾಗಲೂ ಇದೇ ವಿಷಯ ಹೇಳಿದ್ದೆ. ಆ ಸಂದರ್ಭದಲ್ಲಿ ಶಾಸಕ ಎಂ.ಆರ್. ಪಾಟೀಲ ಅವರು ಮನೆಯೊಳಗೆ ಕೂರುವಂತೆ ಆಹ್ವಾನಿಸಿದ್ದರೂ ಅವರು ಮನೆಯೊಳಗೆ ಬಂದಿರಲಿಲ್ಲ ಎಂದರು.
2018ರಿಂದ ಎಂಎಸ್ಪಿ (ಮಿನಿಮಮ್ ಸೆಲ್ಲಿಂಗ್ ಪ್ರೖೆಸ್) ಜಾರಿಗೊಳಿಸಲಾಯಿತು. 2019ರಲ್ಲಿ ಎಂಎಸ್ಪಿ 30 ರೂ. ಇತ್ತು. ಇದೀಗ 41 ರೂ. ಪ್ರತಿ ಕೆಜಿಗೆ ಸಕ್ಕರೆ ಮಾರಾಟ ಮಾಡಲಾಗುತ್ತಿದೆ. ಎಂಎಸ್ಪಿ ದರ ಏರಿಕೆ ಮಾಡಿದರೂ ರೈತರಿಗೆ ಅದರ ಲಾಭ ತಲುಪುವ ಸಾಧ್ಯತೆ ಇಲ್ಲ ಎಂದು ಹೇಳಿದರು.
ಡಾ. ಸ್ವಾಮಿನಾಥನ್ ವರದಿಯ ಎಲ್ಲ ಅಂಶಗಳನ್ನು ಜಾರಿಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದು ಸ್ವತಃ ಡಾ. ಸ್ವಾಮಿನಾಥನ್ ಹೇಳಿದ್ದರು. ಕೇಂದ್ರ ಸರ್ಕಾರ ಅತಿ ಹೆಚ್ಚು ಎಥಿನಾಲ್ ಖರೀದಿ ಮಾಡುತ್ತಿದೆ ಎಂದರು.
ರಾಜ್ಯಸಭೆ ಸದಸ್ಯ ಪ್ರೊ. ಎಂ. ನಾಗರಾಜ, ಶಾಸಕರಾದ ಅರವಿಂದ ಬೆಲ್ಲದ, ಲಿಂಗರಾಜ ಪಾಟೀಲ, ಬಿಜೆಪಿ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.