Recon expo ಹುಬ್ಬಳ್ಳಿಯ ಗೋಕುಲ ರಸ್ತೆ ಏರ್ಪೋರ್ಟ್ ಎದುರಿನ ಮೈದಾನದಲ್ಲಿ ಏರ್ಪಡಿಸಿರುವ ರೆಕಾನ್ ಎಕ್ಸಪೋ ಕುರಿತು ಮಾಹಿತಿ ನೀಡಿದ ಕ್ರೆಡೈ ಹುಬ್ಬಳ್ಳಿ ಧಾರವಾಡ ಅಧ್ಯಕ್ಷ ಗುರುರಾಜ ಅಣ್ಣಿಗೇರಿ. ಸಂಜಯ ಕೊಠಾರಿ, ಅಮೃತ್ ಮೆಹರವಾಡೆ, ಇಸ್ಮಾಯಿಲ್ ಸಂಶಿ, ಸತೀಶ ಮುನವಳ್ಳಿ, ಇತರರು ಇದ್ದರು.
- ಕ್ರೆಡೈನಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಆಯೋಜನೆ
- 150 ಕ್ಕೂ ಹೆಚ್ಚು ಸ್ಟಾಲ್ ಗಳಲ್ಲಿ ಪ್ರದರ್ಶನ
ಹುಬ್ಬಳ್ಳಿ: recon expo ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ಪ್ರಾಪರ್ಟಿ, ಇಂಟಿರಿಯರ್ ಹಾಗೂ ಕನ್ಸ್ಟ್ರಕ್ಶನ್ ಮಟೆರಿಯಲ್ "ರೆಕಾನ್ ಎಕ್ಸಪೋ- 2026' ಪ್ರದರ್ಶನವನ್ನು ಇಲ್ಲಿಯ ಗೋಕುಲ ರಸ್ತೆ ಏರ್ಪೋರ್ಟ್ ಬಳಿಯ ದೇಶಪಾಂಡೆ ಸ್ಟಾರ್ಟ್ ಅಪ್ಸ್ ಎದುರಿನ ಮೈದಾನದಲ್ಲಿ ಜ. 9ರಿಂದ ಮೂರು ದಿನಗಳವರೆಗೆ ಹುಬ್ಬಳ್ಳಿ ಧಾರವಾಡ ಕ್ರೆಡೈ ವತಿಯಿಂದ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಗುರುರಾಜ್ ಅಣ್ಣಿಗೇರಿ ತಿಳಿಸಿದರು.
ನಗರದ ಪ್ರದರ್ಶನ ಸ್ಥಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಿಯಲ್ ಎಸ್ಟೇಟ್, ಒಳಾಂಗಣ ವಿನ್ಯಾಸ ಮತ್ತು ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ಇದಾಗಿದೆ. ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ವೀಕ್ಷಣೆ ಮಾಡಬಹುದು. ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದರು.
ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಹುಬ್ಬಳ್ಳಿ ಧಾರವಾಡವು ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಪ್ರಮುಖ ಹೂಡಿಕೆ ತಾಣವಾಗಿದೆ. ಇದಕ್ಕೆ ಪ್ರದರ್ಶನವು ಪೂರಕವಾಗಲಿದೆ. ಅನೇಕ ಬ್ಯಾಂಕ್ಗಳು ಮಳಿಗೆ ತೆರೆಯಲಿದ್ದು, ಸಾಲ ಸೌಲಭ್ಯ ಒದಗಿಸಲಿವೆ ಎಂದರು.
ರೆಕಾನ್ ಎಕ್ಸಪೋ ಸಂಚಾಲಕ ಇಸ್ಮಾಯಿಲ್ ಸಂಶಿ ಮಾತನಾಡಿ, ಕ್ರೆಡೈನಿಂದ ಇದೇ ಮೊದಲ ಬಾರಿ ಯಶ್ ಇವೆಂಟ್ಸ್ ಸಹಯೋಗದೊಂದಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 150ಕ್ಕೂ ಹೆಚ್ಚು ಸ್ಟಾಲ್ಗಳನ್ನು ನಿರ್ಮಿಸಲಾಗಿದ್ದು, ಇದೊಂದು ಮೆಗಾ ಎಕ್ಸಪೋ ಆಗಿದೆ ಎಂದರು.
ಉತ್ತರ ಕರ್ನಾಟಕ ಅಷ್ಟೇ ಅಲ್ಲದೇ ಬೆಂಗಳೂರು, ಮೈಸೂರು, ದಾವಣಗೆರೆ ಮುಂತಾದ ಜಿಲ್ಲೆಗಳಿಂದಲೂ ಪ್ರಾಪರ್ಟಿ ಕನ್ಸಲ್ಟಂಟ್ಗಳು, ಬಿಲ್ಡರ್ಗಳು ಭಾಗವಹಿಸುತ್ತಿದ್ದಾರೆ. ದುಬೈ ಮೂಲದ ಸಂಸ್ಥೆಯೊಂದು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.
ನಿವೇಶನಗಳು, ಫ್ಲಾಟ್ ಗಳು, ವಾಣಿಜ್ಯ ಮಳಿಗೆಗಳು, ನವೀನ ನಿರ್ಮಾಣ ಸಾಮಗ್ರಿಗಳು, ಆಧುನಿಕ ಒಳಾಂಗಣ ವಿನ್ಯಾಸಗಳನ್ನು ಒಂದೇ ಸೂರಿನಡಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ ಎಂದರು.
ಕ್ರೆಡೈ ಚೇರ್ಮನ್ ಸಂಜಯ ಕೊಠಾರಿ ಮಾತನಾಡಿ, ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಅವಳಿನಗರದ ಅನೇಕ ಜನರಿಗೆ ಸ್ವಂತ ಸೂರು ನನಸಾಗಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ ಎಂದರು.
ಅಧ್ಯಕ್ಷ ಅಮೃತ್ ಮೆಹರವಾಡೆ, ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಹೂಡಿಕೆದಾರರನ್ನು ಸೆಳೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯದರ್ಶಿ ಸತೀಶ ಮುನವಳ್ಳಿ ಮಾತನಾಡಿ, ಪ್ರದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಐಫೋನ್ 17 ಪ್ರೋ ಗೆಲ್ಲುವ ಅವಕಾಶವಿದೆ. ಬಂದವರಿಗೆ ಕೂಪನ್ ನೀಡಲಾಗುತ್ತಿದ್ದು, ನಿತ್ಯವೂ ಒಬ್ಬ ಲಕ್ಕಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಬಸ್ ಸೌಲಭ್ಯ: ಎಕ್ಸಪೋ ಸ್ಥಳಕ್ಕೆ ಬಂದು ಹೋಗಲು ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಹೊಸೂರ, ಹೊಸ ಹಾಗೂ ಹಳೇ ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಂದ ಬಸ್ ಸೇವೆ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಉದ್ಘಾಟನೆ: ಜ. 9ರಂದು ಬೆಳಗ್ಗೆ 11ಕ್ಕೆ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ಸ್ಯಾಂಡಲ್ವುಡ್ ತಾರೆ ಡಿಂಪಲ್ ಕ್ವೀನ್ ರಚಿತಾ ರಾಮ್ ಪಾಲ್ಗೊಳ್ಳುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಶ್ರೀನಿವಾಸ ಮಾನೆ, ಮೇಯರ್ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಕ್ರೆಡೈ ಕರ್ನಾಟಕ ಅಧ್ಯಕ್ಷ ಭಾಸ್ಕರ್ ನಾಗೇಂದ್ರಪ್ಪ ಭಾಗವಹಿಸುವರು.