ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಆರತಕ್ಷತೆಗೆ (Reception) ಭುವನೇಶ್ವರದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾದ ನವ ದಂಪತಿ ಸಂಗಮ ದಾಸ್ ಮತ್ತು ಮೇಧಾ ಕ್ಷೀರಸಾಗರ.
- ಇಂಡಿಗೋ ವಿಮಾನ ರದ್ದಾಗಿದ್ದರಿಂದ ಬಾರದ ನವ ದಂಪತಿ.
- ಭರ್ಜರಿ ಅಡುಗೆಯನ್ನೂ ಸಿದ್ಧಪಡಿಸಲಾಗಿತ್ತು.
- Reception ಆರತಕ್ಷತೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು.
ನವ ದಂಪತಿ ಭುವನೇಶ್ವರದ ಸಂಗಮ ದಾಸ್ ಮತ್ತು ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಅವರು ಇಂಡಿಗೋ ವಿಮಾನ ಹಾರಾಟ ರದ್ದಾಗಿದ್ದರಿಂದ ಭುವನೇಶ್ವರದಿಂದ ಹುಬ್ಬಳ್ಳಿಗೆ ಬರಲಾಗಲಿಲ್ಲ. ಆರತಕ್ಷತೆಗಾಗಿ ಸಂಬಂಧಿಕರು, ಸ್ನೇಹಿತರು ಬಂದಿದ್ದರು. ಭರ್ಜರಿ ಅಡುಗೆಯನ್ನೂ ಸಿದ್ಧಪಡಿಸಲಾಗಿತ್ತು.
ನವ ದಂಪತಿ ಗೈರು ಹಾಜರಿಯಿಂದ ಎಲ್ಲವೂ ವ್ಯರ್ಥವಾಗಬಾರದೆಂಬ ಕಾರಣಕ್ಕೆ ಸಮಾರಂಭ ನಡೆಯುತ್ತಿದ್ದ ಹಾಲ್ನಲ್ಲಿ ದೊಡ್ಡ ಸ್ಕೀ›ನ್ ಅಳವಡಿಸಿ, ಭುವನೇಶ್ವರಕ್ಕೆ ವಿಡಿಯೋ ಕಾನ್ಪರೆನ್ಸ್ ಮಾಡಲಾಯಿತು.
ಸಂಗಮ ಹಾಗೂ ಮೇಧಾ ಮದುವೆ ಉಡುಗೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾದರು. ಆರತಕ್ಷತೆಗೆ ಸಿದ್ಧಪಡಿಸಿದ್ದ ಮಂಟಪದಲ್ಲಿ ಸಂಗಮ ಮತ್ತು ಮೇಧಾ ಬದಲು ಮೇಧಾಳ ತಂದೆ-ತಾಯಿ ಅವರನ್ನು ಕೂರಿಸಿ, ಬಂಧುಗಳು ಮತ್ತು ಸ್ನೇಹಿತರು ಆರತಿ ಮಾಡಿದರು.
ವಿಡಿಯೋ ಕಾನ್ಪರೆನ್ಸ್ ಮೂಲಕವೇ ಸಂಬಂಧಿ ಹಾಗೂ ಸ್ನೇಹಿತರು ನವ ದಂಪತಿಗೆ ಹಾರೈಸಿದರು. ಸಂಗಮ ಮತ್ತು ಮೇಧಾ ಇದನ್ನೆಲ್ಲ ಭುವನೇಶ್ವರದ ತಮ್ಮ ಮನೆಯಲ್ಲಿಯೇ ಕುಳಿತು ವೀಕ್ಷಿಸಿದರು.
ಆಗಿದ್ದಾದರೂ ಏನು ? : ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದ ಭುವನೇಶ್ವರದ ಸಂಗಮ ದಾಸ್ ಮತ್ತು ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಪರಸ್ಪರ ಪ್ರೀತಿಸುತ್ತಿದ್ದು, ಅವರಿಬ್ಬರ ಪಾಲಕರು ಮದುವೆಗೆ ಒಪ್ಪಿಗೆ ನೀಡಿದ್ದರು.
ಹೀಗಾಗಿ, ನ. 23ರಂದು ಪಾಲಕರ ಒಪ್ಪಿಗೆ ಮಧ್ಯೆ ಭುವನೇಶ್ವರದಲ್ಲಿ ಇಬ್ಬರೂ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನ. 26ರಂದು ಭುವನೇಶ್ವರದಲ್ಲಿ ಆರತಕ್ಷತೆಯನ್ನೂ ಮಾಡಿಕೊಂಡಿದ್ದರು.
ಹುಬ್ಬಳ್ಳಿಯಲ್ಲಿರುವ ಸಂಬಂಧಿಗಳು ಹಾಗೂ ಸ್ನೇಹಿತರಿಗಾಗಿ ಡಿ. 3ರಂದು ಇಲ್ಲಿನ ಗುಜರಾತ ಭವನದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಗಮ ದಾಸ್ ಜತೆಗೆ ಆತನ ಅಣ್ಣನ ವಿವಾಹವೂ ನಡೆದಿತ್ತು.
ಹೀಗಾಗಿ, ಸಂಗಮ ದಾಸ್, ಮೇಧಾ ಕ್ಷೀರಸಾಗರ, ಸಂಗಮನ ಅಣ್ಣ, ಅತ್ತಿಗೆ ಹಾಗೂ ಆತನ ತಂದೆ, ತಾಯಿಯ ವಿಮಾನದ ಟಿಕೆಟ್ ಅನ್ನು ಮುಂಚಿತವಾಗಿಯೇ ಬುಕ್ ಮಾಡಲಾಗಿತ್ತು. ಡಿ. 2ರಂದೇ ಭುವನೇಶ್ವರದ ಬೀಗರೆಲ್ಲರೂ ಹುಬ್ಬಳ್ಳಿಗೆ ಇಂಡಿಗೋ ವಿಮಾನದ ಮೂಲಕ ಬಂದಿಳಿಯಬೇಕಿತ್ತು. ಸಂಗಮ ಮತ್ತು ಮೇಧಾ ಅವರು ಕುಟುಂಬದೊಂದಿಗೆ ಬರಬೇಕಿದ್ದ ವಿಮಾನ ರದ್ದಾಗಿದ್ದಾಗಿ ಅಧಿಕಾರಿಗಳು ಪ್ರಕಟಿಸಿದರು.
ಈ ಮಧ್ಯೆ ಹುಬ್ಬಳ್ಳಿಯಲ್ಲಿ ಮೇಧಾಳ ತಂದೆ ಅನಿಲ ಕ್ಷೀರಸಾಗರ ಮತ್ತು ಕುಟುಂಬದವರು ನವ ದಂಪತಿಗಾಗಿ ಕಾಯುತ್ತ ಕುಳಿತಿದ್ದರು. ಮಗಳು ಮತ್ತು ಅಳಿಯ ಬರುವುದಿಲ್ಲವೆಂಬ ಸುದ್ದಿ ತಿಳಿದು ಬೇಸರಗೊಂಡರು.
ಅಷ್ಟರಲ್ಲಾಗಲೇ, ಆರತಕ್ಷತೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಏನು ಮಾಡಬೇಕೆಂದು ತೋಚದೆ ಚಿಂತೆಗೀಡಾಗಿದ್ದರು. ಇಲ್ಲಿನ ವಿಜಯ ನಗರದಲ್ಲಿ ಮೆಡಿಕಲ್ ಶಾಪ್ ಹೊಂದಿರುವ ಅನಿಲ ಕ್ಷೀರಸಾಗರ ಅವರು, ಮುಂಬೈ ಮತ್ತಿತರೆಡೆ ನಡೆಯುವ ಮೀಟಿಂಗ್ಗಳಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ, ಆರತಕ್ಷತೆಯನ್ನೂ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾಡೋಣವೆಂದು ಯೋಜಿಸಿ, ತಕ್ಷಣ ಕಾರ್ಯಪ್ರವೃತ್ತರಾದರು.
ಆರತಕ್ಷತೆಗೆ ಬಂದವರು, ಮೇಧಾಳ ತಂದೆ-ತಾಯಿಗೆ ಗಿಫ್ಟ್ಗಳನ್ನು ನೀಡಿ, ವಿಡಿಯೋ ಕಾನ್ಪರೆನ್ಸ್ ಮೂಲಕವೇ ವಧು-ವರರನ್ನು ಹರಿಸಿದರು.