ರಂಜಾನ್ (ramzan) ಹಬ್ಬದ ನಿಮಿತ್ತ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹುಬ್ಬಳ್ಳಿ: ರಂಜಾನ್ (ramzan) ಹಬ್ಬದ ನಿಮಿತ್ತ ಇಲ್ಲಿಯ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಮೌಲಾನಾ ಜಹಿರುದ್ದೀನ್ ಖಾಜಿ ಅವರು ಕುರಾನ್ ಪಠಿಸಿದರು. ದೇಶದ ಐಕ್ಯತೆಗೆ ಸರ್ವಧರ್ಮೀಯರೊಂದಿಗಿನ ಸಹಬಾಳ್ವೆ ಅಗತ್ಯ ಎಂದು ಬೋಧಿಸಿದರು. ವಿವಿಧ ಧರ್ಮ ಹಾಗೂ ಸಂಸ್ಕೃತಿ ಹೊಂದಿರುವ ಭಾರತೀಯರಾದ ನಾವು ಶಾಂತಿ, ಸಮಾನತೆ ಹಾಗೂ ಸಹೋದರತೆಯಿಂದ ಜೀವನ ಸಾಗಿಸಬೇಕು. ಲೋಕ ಕಲ್ಯಾಣವಾಗಬೇಕು. ಎಲ್ಲೆಡೆ ಸಮೃದ್ಧ ಮಳೆ ಬೆಳೆಯಾಗಲು ಪ್ರಾರ್ಥಿಸಲಾಗಿದೆ ಎಂದರು.
ಎಂಎಲ್‌ಸಿ ಎಫ್.ಎಚ್. ಜಕ್ಕಪ್ಪನವರ, ಹುಬ್ಬಳ್ಳಿ ಅಂಜುಮನ್‌ಇ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಗೌರವ ಕಾರ್ಯದರ್ಶಿ ಬಷೀರ್ ಅಹ್ಮದ್ ಹಳ್ಳೂರ, ಪ್ರಮುಖರಾದ ಅಲ್ತಾಫ್‌ಹುಸೇನ್ ಹಳ್ಳೂರ, ದಾದಾ ಖೈರಾತಿ, ಎಂ.ಸಿ. ಸವಣೂರ, ಅನ್ವರ್ ಮುಧೋಳ, ಬಾಬಾಜಾನ್ ಮುಧೋಳ, ಸದಾನಂದ ಡಂಗನವರ ಇತರರು ಇದ್ದರು.