ಹುಬ್ಬಳ್ಳಿಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವ ಸಮಾರಂಭವನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು(Rambapuri jagadguru) ಹಾಗೂ ಹು-ಧಾ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಉದ್ಘಾಟಿಸಿದರು.
ಹುಬ್ಬಳ್ಳಿ: ಮನುಷ್ಯನಿಗೆ ಭಗವಂತ ಅಮೂಲ್ಯ ಕೊಡುಗೆ ನೀಡಿದ್ದಾನೆ. ಅರಿವು ಮತ್ತು ಆದರ್ಶಗಳಿಂದ ಮನುಷ್ಯನ ಬದುಕು ಉಜ್ವಲಗೊಳ್ಳುತ್ತದೆ. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಜ್ಞಾನದ ಸಂಕೇತ. ಅರಿವಿನ ಬದುಕು ಶ್ರೇಯಸ್ಸಿಗೆ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದ ಆವರಣದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕಾರ್ತಿಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ದೇವರು ಎಲ್ಲರಲ್ಲಿ ಮತ್ತು ಎಲ್ಲೆಡೆಯೂ ಇದ್ದಾನೆ. ಆದರೆ, ಎಲ್ಲರೂ ದೇವರಲ್ಲಿ ಭಕ್ತಿ, ಶ್ರದ್ಧೆ ಇಟ್ಟುಕೊಂಡಿಲ್ಲ. ನಿಂತ ನೆಲ ಕುಡಿಯುವ ನೀರು, ಊಟ ಮಾಡುವ ಅನ್ನ, ಉಸಿರಾಡುವ ಗಾಳಿ, ಬೆಳಕು, ಎಲ್ಲವೂ ದೇವರಿತ್ತ ಕೊಡುಗೆ. ಇಷ್ಟೆಲ್ಲ ಸಂಪನ್ಮೂಲ ಕೊಟ್ಟ ಭಗವಂತನ ಸ್ಮರಣೆ ಮತ್ತು ಪೂಜೆ ಸಲ್ಲಿಸದೇ ಹೋದರೆ ಅರಿವಿನ ಜನ್ಮ ಸಾರ್ಥಕವಾಗುವುದಿಲ್ಲ ಎಂದರು.
ಮೇಯರ್ ಜ್ಯೋತಿ ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಧರ್ಮ ಪರಂಪರೆ ಮತ್ತು ಶ್ರೀ ಗುರುವಿನ ಹಿರಿಮೆ ಕುರಿತು ಉಪದೇಶಾಮೃತವನ್ನಿತ್ತರು.
ಮಾಗಣಗೇರಿ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ಶ್ರೀ ದಾನಯ್ಯ ಸ್ವಾಮೀಜಿ, ಕಲಘಟಗಿ ಹನ್ನೆರಡು ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಗಣ್ಯರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರತಿಭಾ ಪುರಸ್ಕಾರ ನೀಡಿ ಆಶೀರ್ವದಿಸಿದರು.
ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಇಂದುಮತಿ ಮಾನ್ವಿ, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ಹುಬ್ಬಳ್ಳಿ ಘಟಕದ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಉಪಸ್ಥಿತರಿದ್ದರು. ಜಿ.ವಿ. ಹಿರೇಮಠ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಮುಂಭಾಗದಲ್ಲಿ ಸಹಸ್ರ ದೀಪಗಳನ್ನು ಹಚ್ಚಿ ಭಕ್ತರು ಸಂಭ್ರಮಿಸಿದರು.