ram navami ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀ ರಾಮನ ಬೃಹತ್​ ಉತ್ಸವ ಮೂರ್ತಿಯನ್ನು ಶುಕ್ರವಾರ ಜಗದ್ಗುರು ಶ್ರೀ ಗುರುಸಿದ್ಧರಾಯೋಗೀಂದ್ರ ಸ್ವಾಮೀಜಿ ಅನಾವರಣ ಮಾಡಿದರು. ಸುಬ್ರಮಣ್ಯ ಶಿರಕೋಳ, ಕೃಷ್ಣಾ ಗಂಡಗಾಳೇಕರ, ಮಲ್ಲಪ್ಪ ಶಿರಕೋಳ, ರವಿ ನಾಯಕ ಇತರರು ಇದ್ದರು. 
ಧಾರವಾಡ

ram navami ರಾಮನ ಮೂರ್ತಿಯ ಬೃಹತ್​ ಶೋಭಾಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಆಯೋಜನೆ
  • ೧೨ ಅಡಿ ಎತ್ತರದ ಮೂರ್ತಿಯ ಭವ್ಯ ಮೆರವಣಿಗೆ
ಹುಬ್ಬಳ್ಳಿ: ram navami ಇಲ್ಲಿಯ ಬಾನಿ ಓಣಿಯ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಮಾ. 29ರಂದು ಸಂಜೆ 4ಕ್ಕೆ ಉತ್ಸವ ಮೂರ್ತಿಯ ಬೃಹತ್​ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಗಂಡಗಾಳೇಕರ ತಿಳಿಸಿದರು.
ನಗರದ ಮೂರುಸಾವಿರ ಮಠದಲ್ಲಿ ಶುಕ್ರವಾರ ಶ್ರೀರಾಮ ಹಾಗೂ ಹನುಮಂತರ ಬೃಹತ್​ ಉತ್ಸವ ಮೂರ್ತಿ ಉದ್ಘಾಟನೆ ಸಮಾರಂಭದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.2017ರಿಂದ ರಾಮನವಮಿ ಉತ್ಸವ ಆಚರಿಸುತ್ತ ಬರಲಾಗಿದೆ. ಈ ವರ್ಷ ಉತ್ಸವ ಮೂರ್ತಿಗಳನ್ನು ಹೈದ್ರಾಬಾದ್​ನಲ್ಲಿ ತಯಾರಿಸಿ ತರಲಾಗಿದೆ. ಸುಮಾರು 12 ಅಡಿ ಎತ್ತರದ ರಾಮನ ಮೂರ್ತಿ, 8 ಅಡಿ ಎತ್ತರದ ಹನುಮನ ಮೂರ್ತಿಗಳಿದ್ದು, ಮೆರವಣಿಗೆಗೆ ಮೆರಗು ನೀಡಲಿವೆ ಎಂದರು.
ಜತೆಗೆ ಮಹರ್ಷಿ ವಾಲ್ಮೀಕಿ ಹಾಗೂ ಇತರ ಮಹನೀಯರ ಮೂರ್ತಿಗಳು ಶೋಭಾಯಾತ್ರೆಯಲ್ಲಿ ಇರಲಿದ್ದು, ಡಿಜೆಯಲ್ಲಿ ಭಕ್ತಿ ಸಂಗೀತದೊಂದಿಗೆ ಮೆರವಣಿಗೆ ಮಾಡಲಾಗುವುದು. ಶಕ್ತಿ ರೋಡ್​ನಿಂದ ಆರಂಭವಾಗುವ ಮೆರವಣಿಗೆಯು ಸ್ಟೇಶನ್​ ರಸ್ತೆ, ಮರಾಠ ಗಲ್ಲಿ, ಕೊಪ್ಪಿಕರ ರಸ್ತೆ ಸೇರಿ ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಪುನಃ ಬಾನಿ ಓಣಿಗೆ ಆಗಮಿಸಲಿದೆ ಎಂದರು.
ಇದಕ್ಕೂ ಮೊದಲು ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದಿಪ ಶೆಟ್ಟರ್​, ಸಂಸದ ಜಗದೀಶ ಶೆಟ್ಟರ್​, ಇತರರು ಪಾಲ್ಗೊಳ್ಳುವರು ಎಂದರು.
ಮೂರುಸಾವಿರ ಮಠದಲ್ಲಿ ಇಡಲಾಗಿರುವ ಬೃಹತ್​ ರಾಮ ಹಾಗೂ ಹನುಮನ ಮೂರ್ತಿ ಮತ್ತು ರಾಮಾಯಣ ಕುರಿತ ಡಿಜಿಟಲ್​ ಪ್ರದರ್ಶನ ವಾಹನವನ್ನು ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅನಾವರಣಗೊಳಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಿರಕೋಳ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಸಮಿತಿಯ ವಿನಯ ಸಜ್ಜನರ, ಮಲ್ಲಪ್ಪ ಶಿರಕೋಳ, ಡಾ. ರವೀಂದ್ರ ಯಲಕಾನ, ಪ್ರಭು ನವಲಗುಂದಮಠ, ರವಿ ನಾಯಕ, ಇತರರು ಗೋಷ್ಠಿಯಲ್ಲಿದ್ದರು.