ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭವನ್ನು ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮೇಯರ್​ ಜ್ಯೋತಿ ಪಾಟೀಲ ಉದ್ಘಾಟಿಸಿದರು. 
ಧಾರವಾಡ

RAJYOTSAVA ಪಾಲಿಕೆಯಿಂದ ಅದ್ದೂರಿ ರಾಜ್ಯೋತ್ಸವ ಆಚರಣೆ

ಕನ್ನಡಪರ ಚಿತ್ರಗೀತೆಗಳು, ಭಾವಗೀತೆಗಳು ಎಲ್ಲೆಡೆ ಕೇಳಿಬಂದವು. ಇದೇ ಸಂದರ್ಭದಲ್ಲಿ ಹೂವುಗಳಿಂದ ಅಲಂಕೃತಗೊಂಡಿದ್ದ ತೆರೆದ ವಾಹನದಲ್ಲಿ ಇರಿಸಿದ್ದ ಶ್ರೀ ಭುವನೇಶ್ವರಿ ಮಾತೆಯ ಭಾವಚಿತ್ರದ ಮೆರವಣಿಗೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. 
ಹಲವಾರು ಸ್ಥಭ್ಧ ಚಿತ್ರಗಳು, ಐತಿಹಾಸಿಕ ಪುರುಷರು ಹಾಗೂ ವೀರರ ವೇಷಭೂಷಣ ತೊಟ್ಟ ಚಿಣ್ಣರು, ಡೋಲು, ಜಾಂಜ್, ಕರಡಿ ಮಜಲು ಮತ್ತಿತರ ವಾದ್ಯಗಳೊಂದಿಗೆ ಶ್ರೀಮಠದ ಆವರಣದಿಂದ ಹೊರಟ ಮೆರವಣಿಗೆ, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ನೆಹರು ಮೈದಾನದಲ್ಲಿ ಕೊನೆಗೊಂಡಿತು. ಹಳದಿ ಹಾಗೂ ಕೆಂಪು ಮಿಶ್ರಿತ ಪೇಟ ತೊಟ್ಟಿದ್ದ ಪುರುಷರು, ಮಹಿಳೆಯರು ಮೆರವಣಿಗೆ ಉದ್ದಕ್ಕೂ ಸಾಗಿದರು. ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು, ಆಟೋ ಚಾಲಕರು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಂಚರಿಸಿ, ಕನ್ನಡ ನೆಲ, ಭಾಷೆಗೆ ಜಯಘೋಷಗಳನ್ನು ಕೂಗಿದರು. 
ಕನ್ನಡಪರ ಧ್ವಜ ತೊಟ್ಟಿದ್ದ ಆಟೋಗಳು ಮೆರವಣಿಗೆಯಲ್ಲಿ ಸಾಗಿದವು. ಅಷ್ಟೇ ಅಲ್ಲದೇ, ನಗರದಲ್ಲಿ ಸಂಚರಿಸುತ್ತಿದ್ದ ಬಹುತೇಕ ವಾಹನಗಳು ಕನ್ನಡಪರ ಧ್ವಜ ಕಟ್ಟಿಕೊಂಡು ಸಂಚರಿಸುತ್ತಿದ್ದದ್ದು ಕಂಡುಬಂದಿತು. 
ಇದಕ್ಕೂ ಮೊದಲು ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಅದ್ದೂರಿ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಚುನಾವಣೆ ನಂತರ ರಾಜಕಾರಣ ಬಿಟ್ಟು ಪ್ರತಿಯೊಬ್ಬ ರಾಜಕಾರಣಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. 
ದೇಶದ ಅಗ್ರಣೀಯ ಪಂಥದಲ್ಲಿ ಕರ್ನಾಟಕ ಸ್ಥಾನ ಪಡೆದುಕೊಂಡಿದೆ. ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ಇಡೀ ಜಗತ್ತಿನಲ್ಲಿಯೇ ಹೆಸರು ಮಾಡಿದೆ ಎಂದು ಹೇಳಿದರು. 
ಕನ್ನಡ ಕೇವಲ ಭಾಷೆ ಅಲ್ಲ. ಕನ್ನಡ ಪ್ರತಿಯೊಬ್ಬ ಕನ್ನಡಿಗನ ಉಸಿರು. ಬದುಕಿಗೆ ದಾರಿ ತೋರಿಸಿದ ಜ್ಯೋತಿ. ಅತಿ ಹೆಚ್ಚು ಜ್ಞಾನಪೀಠ ಗಳಿಸಿದ್ದು ಕನ್ನಡ. ಇದೊಂದು ಪವಿತ್ರ ಭಾಷೆ ಎಂದರು. 
ಪಾಲಿಕೆ ಪ್ರತಿಪಕ್ಷ ನಾಯಕ ಇಮ್ರಾನ್ ಯಲಿಗಾರ ಮಾತನಾಡಿ, ಜಾತಿ ಬೇಧ ಮರೆತು ಆಚರಿಸುವ ಹಬ್ಬವೆಂದರೆ ಅದು ಕನ್ನಡ ಹಬ್ಬ ಎಂದರು. 
ಅಧ್ಯಕ್ಷತೆ ವಹಿಸಿದ್ದ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಕನ್ನಡ ಹಬ್ಬ ಒಂದೇ ದಿನಕ್ಕೆ ಸೀಮಿತವಾಗಬಾರದು. ಕನ್ನಡಾಂಬೆಯನ್ನು ನಿತ್ಯ ಪೂಜಿಸಬೇಕು ಎಂದು ಸಲಹೆ ನೀಡಿದರು. 
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ, ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕಾರ, ರಾಧಾಬಾಯಿ ಸಫಾರೆ, ದೊರೈರಾಜ ಮಣಿಕುಂಟ್ಲ, ಚೇತನ ಹಿರೆಕೆರೂರ, ರಾಜಣ್ಣ ಕೊರವಿ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.