ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಐಶ್ವರ್ಯ ರಾಯ್ಕರ್ ಗೆ ಸನ್ಮಾನಿಸಲಾಯಿತು.
ಧಾರವಾಡ: ಮಕ್ಕಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೆ ಸಂಸ್ಕಾರವುಳ್ಳ ಸತ್ಪçಜೆಗಳನ್ನಾಗಿ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ರಾಯಚೂರಿನ ಆಕಾಶವಾಣಿ ವಿಶ್ರಾಂತ ಅಧಿಕಾರಿ ಡಾ. ಬಿ.ಎಂ. ಶರಭೇಂದ್ರಸ್ವಾಮಿ ಅಭಿಪ್ರಾಯಪಟ್ಟರು.
ಕ.ವಿ.ವ. ಸಂಘವು ರಶ್ಮಿ ಮಂಜುನಾಥ ನಾಯಕ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ `ವಿದ್ಯಾರಶ್ಮಿ' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಇಂದಿನ ಯಾಂತ್ರಿಕ ಯುಗದಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಲು ಸಾಧ್ಯವಾಗುತ್ತಿಲ್ಲ. ನ್ಯಾನೊ ಕುಟುಂಬಗಳ ಸಂಖ್ಯೆ ಹೆಚ್ಚಾಗಿ ಮಕ್ಕಳಿಗೆ ಕುಟುಂಬದಲ್ಲಿ ಭಾವನಾತ್ಮಕ ಸಂಬಂಧಗಳು ಇಲ್ಲದಂತಾಗಿದೆ. ಜನ್ಮ ನೀಡಿದಾಕ್ಷಣ ತಂದೆ ತಾಯಿಗಳ ಜವಾಬ್ದಾರಿ ಮುಗಿಯುವುದಿಲ್ಲ. ಮನೆಯಿಂದಲೇ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.
ದತ್ತಿದಾನಿ ಕೆ.ಎಚ್. ನಾಯಕ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಇಂದು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರದ ಕೊರತೆ ಇದೆ. `ವಿದ್ಯಾರಶ್ಮಿ' ಪ್ರಶಸ್ತಿ ಜತೆ `ರಂಗರಶ್ಮಿ' ಪ್ರಶಸ್ತಿಯನ್ನೂ ಮಗಳ ಸ್ಮರಣೆಯಲ್ಲಿ ನೀಡಿ ಅವಳನ್ನು ದತ್ತಿ ಮೂಲಕ ಜೀವಂತವಾಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಿರ್ಲಾಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಐಶ್ಚರ್ಯ ರಾಯ್ಕರ್‌ಗೆ `ವಿದ್ಯಾರಶ್ಮಿ' ಪ್ರಶಸ್ತಿ ನೀಡಲಾಯಿತು. ನಗರದ ಸರ್ಕಾರಿ ಪ್ರೌಢಶಾಲಾ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಿಸಲಾಯಿತು. ಕ.ವಿ.ವ. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಶಶಿಧರ ನರೇಂದ್ರ, ಎಂ.ಎಂ. ಚಿಕ್ಕಮಠ ಇತರರಿದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.