ಕಲಘಟಗಿ ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಮರವನ್ನು ತೆರವುಗೊಳಿಸುತ್ತಿರುವ ಸಾರ್ವಜನಿಕರು. 
ಧಾರವಾಡ

Rain effect: ನೆಲ ಕಚ್ಚಿದ ಅಡಿಕೆ, ಬಾಳೆ

ಮಂಜುನಾಥ ಗದಗಿನ
ಕಲಘಟಗಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ(storm) ಸಹಿತ ಮಳೆಗೆ(Rain) ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಸಾಕಷ್ಟು ಹಾನಿ ಸಂಭವಿಸಿದೆ.
ಮಂಗಳವಾರ ಸಂಜೆ ಸುರಿದ ಧಾರಾಕಾರ ಬಿರುಗಾಳಿ ಸಹಿತ ಮಳೆಗೆ, ಸಂತೆಯಲ್ಲಿ ವ್ಯಾಪಾರಕ್ಕಾಗಿ ಇಡಲಾಗಿದ್ದ ತರಕಾರಿ, ಸೊಪ್ಪು ಸೇರಿದಂತೆ ವ್ಯಾಪಾರಸ್ಥರ ಅಂಗಡಿ ತಾಡಪತ್ರಿಗಳು ಗಾಳಿಗೆ ಹಾರಿ ಸಾಕಷ್ಟು ಹಾನಿಯಾಗಿದೆ.
ತಾಲೂಕಿನ ಸೂಳಿಕಟ್ಟಿ ಗ್ರಾಮದಲ್ಲಿ ಎರಡು ತೆಂಗಿನ ಮರಗಳಿಗೆ ಸಿಡಿಲು ಬಡಿದ ಪರಿಣಾಮ ಮರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮಂಗಳವಾರ ಬೀಸಿದ ಬಿರುಗಾಳಿಗೆ ಜಿನ್ನೂರು ಗ್ರಾಮದಲ್ಲಿ ಕೆಲವು ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿವೆ. ದೇವಿಕೊಪ್ಪ ನೆಲ್ಲಿಹರಿವಿ, ತಂಬೂರು, ದ್ಯಾವನಕೊಂಡ, ಶಿಗೀಗಟ್ಟಿ ಎಮ್ಮೆಟ್ಟಿ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಅತಿಯಾದ ಬಿರುಗಾಳಿಗೆ ಹೊಲದಲ್ಲಿ ಬೆಳೆಯಲಾಗಿದ್ದ ಅಡಿಕೆ ಬೆಳೆ, ಬಾಳೆ ಗಿಡಗಳು ನೆಲಕಚ್ಚಿವೆ.
ಕಳೆದ ಎರಡು ಮೂರು ತಿಂಗಳುಗಳಿಂದ ಅತಿಯಾದ ಬಿಸಿಲಿನ ತಾಪಕ್ಕೆ, ಹೊಲಗಳಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟದ ಕುಸಿತದಿಂದಾಗಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿತ್ತು. ಪರಿಣಾಮ ಕಬ್ಬಿನ ಬೆಳೆಗೆ ನೀರು ಹಾಯಿಸಲು ರೈತರು ತೊಂದರೆ ಅನುಭವಿಸುವಂತಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ, ಅಂತರ್ಜಲ ಮಟ್ಟ ಸುಧಾರಣೆಯಾಗುವುದಲ್ಲದೆ ನೀರಿನ ಕೊರತೆ ಉಂಟಾಗಿದ್ದ ಕಬ್ಬಿನ ಬೆಳೆಗೆ ಮಳೆರಾಯ ಆಸರೆಯಾಗಿದ್ದಾನೆ.