ಕುಂದಗೋಳ ತಾಲೂಕಿನ ತಾಲೂಕಿನ ಯರಗುಪ್ಪಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿದ ಸಚಿವ ಸಂತೋಷ ಲಾಡ್. ರಾಜು ಮಾವವರಕ, ಕುಸುಮಾವತಿ ಶಿವಳ್ಳಿ, ಎನ್.ಎಚ್. ಕೋನರೆಡ್ಡಿ ಇತರರಿದ್ದರು.
ಕುಂದಗೋಳ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಅಭಾವ ಹಾಗೂ ಅಸಮತೋಲಿತ ಮಳೆಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಶೇ.96ರಷ್ಟು ಬಿತ್ತನೆಯಾಗಿದ್ದರೂ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಯರಗುಪ್ಪಿ ಗ್ರಾಮದ ರೈತರಾದ ನಿಂಗಪ್ಪ ಕಂಬಳಿ ಹಾಗೂ ಚನ್ನಪ್ಪ ಬೂದಿಹಾಳ ಅವರ ಜಮೀನುಗಳಿಗೆ ಗುರುವಾರ ಭೇಟಿ ನೀಡಿ, ಬೆಳೆಗಳ ವಾಸ್ತವ ಸ್ಥಿತಿ ಪರಿಶೀಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಇದೇ ವೇಳೆ ಬೆಳೆ ಸಮೀಕ್ಷೆ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಸಚಿವರು, ಹಿಂದೆ ರಾಜ್ಯದಲ್ಲಿ ಬರಗಾಲ ಬಂದಾಗ ರೈತರ ಸಾಲಮನ್ನಾ ಮಾಡಲು ಸಿದ್ದರಾಮಯ್ಯ ಹಾಗೂ ಉಗ್ರಪ್ಪ ಒತ್ತಾಯಿಸಿದ್ದರು. ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಬಳಿ ಹಣ ಮುದ್ರಿಸುವ ಯಂತ್ರ ಇದೆಯೇ? ಎಂದು ಉತ್ತರಿಸಿದ್ದರು. ಬಿಜೆಪಿ ಆಡಳಿತಾವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ ಹಾಗೂ ಬಸವರಾಜ ಬೊಮ್ಮಾಯಿ ಅವರು ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದರು.
ಬರ ಘೋಷಣೆಗೆ ಕೇಂದ್ರ ಸರ್ಕಾರದ ತಾಂತ್ರಿಕ ಮಾನದಂಡಗಳಿದ್ದು, ಮಳೆಯ ಪ್ರಮಾಣದ ಜತೆಗೆ ಬೆಳೆ ಬೆಳವಣಿಗೆಯ ಹಂತದಲ್ಲಿ ಮಳೆಯಾಗದಿರುವುದನ್ನೂ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಸ್ಥಳೀಯ ರೈತರು, ಶಾಸಕರು ಹಾಗೂ ಕೃಷಿ ತಜ್ಞರ ಸಲಹೆಗಳನ್ನು ಕ್ರೋಡೀಕರಿಸಿ, ವಿಮೆ ಸೇರಿದಂತೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಮಾವವರಕ, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎನ್.ಎಚ್. ಕೋನರೆಡ್ಡಿ, ಎಂ.ಎಸ್. ಅಕ್ಕಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ, ಮುಖಂಡರಾದ ಅರವಿಂದ ಎಂ. ಕಟಗಿ, ಚಂದ್ರಶೇಖರ ಜುಟ್ಟಲ, ಗೌಡಪ್ಪಗೌಡ ಪಾಟೀಲ, ಶಿವಾನಂದ ಬೆಂತೂರ, ನೆಹರು ಪಾಟೀಲ, ರಮೇಶ ಕೊಪ್ಪದ, ಜಗದೀಶ ಉಪ್ಪಿನ, ಅಡಿವೇಪ್ಪ ಶಿವಳ್ಳಿ, ಸಲೀಂ ಕ್ಯಾಲಕೊಂಡ, ಸಲೀಂ ಕಡ್ಲಿ, ಗುರು ಚಲವಾದಿ ಇತರರಿದ್ದರು.
ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿರುವ ಕೇಂದ್ರ ಬಿಜೆಪಿ ಸರ್ಕಾರ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನೂ ಮನ್ನಾ ಮಾಡಬೇಕು. ತಮ್ಮ ವಿಶ್ವಗುರು ಬಳಿ ಮಾತನಾಡಿ ಕೇಂದ್ರದ ವ್ಯಾಪ್ತಿಯಲ್ಲಿರುವ ವಿಮಾ ಕಂಪನಿಗಳಿಂದ ರೈತರಿಗೆ ಪರಿಹಾರ ಕೊಡಿಸಲಿ.