rain damage ಹುಬ್ಬಳ್ಳಿಯ ಉಣಕಲ್ಲ ಕೆರೆಯು ಮೊದಲ ಮಳೆಗೆ ಕೋಡಿ ಹರಿದಿರುವುದು. 
ಧಾರವಾಡ

rain damage ವರ್ಷದ ಮೊದಲ ಮಳೆಗೇ ಕಿರಿಕಿರಿ ಶುರು

ಪ್ರಮುಖ ಮುಖ್ಯಾಂಶಗಳು

  • ಹದಗೆಟ್ಟ ಹುಬ್ಬಳ್ಳಿ ರಸ್ತೆಗಳು
  • ವಾಹನ ಸವಾರರ ಪರದಾಟ
ಹುಬ್ಬಳ್ಳಿ: rain damage ವರ್ಷದ ಮೊದಲ ಮಳೆಯು ಭರ್ಜರಿಯಾಗಿ ಆರಂಭವಾಗಿದ್ದು, ಸರಿಯಾದ ವ್ಯವಸ್ಥೆ ಇಲ್ಲದ್ದಕ್ಕೆ ನಗರದಲ್ಲಿ ಕಿರಿಕಿರಿಗೆ ಕಾರಣವಾಗಿದೆ.
ನಗರದ ಬಹುತೇಕ ಕಡೆಗಳಲ್ಲಿ ಸುಗಮ ಹರಿಯುವಿಕೆಗೆ ಅವಕಾಶ ಇಲ್ಲದ ಕಾರಣಕ್ಕೆ ಅರ್ಧ ತಾಸು ಜಡಿಮಳೆ ಸುರಿಯುತ್ತಿದ್ದಂತೆ ರಸ್ತೆಗಳು ಜಲಾವೃತವಾಗುತ್ತಿವೆ. ಯಾವುದೇ ಸಿದ್ಧತೆ ಇಲ್ಲದ ಆಡಳಿತ ವ್ಯವಸ್ಥೆಯಿಂದಾಗಿ ಮಹಾನಗರದಲ್ಲಿ ಹಲವು ಅವಘಡ, ಅವಾಂತರಗಳಿಗೆ ಮಳೆ ಕಾರಣವಾಗುತ್ತಿದೆ.
ಹುಬ್ಬಳ್ಳಿಯ ಬಹುದೊಡ್ಡ ಯೋಜನೆಯಾದ ಫ್ಲೈಓವರ್​ ಕಾಮಗಾರಿಯು ಕುಂಟುತ್ತ ಸಾಗಿರುವುದರಿಂದ ಹೃದಯ ಭಾಗ ಚನ್ನಮ್ಮ ವೃತ್ತ ಹಾಗೂ ಅಕ್ಕಪಕ್ಕದ ರಸ್ತೆಗಳು ಹದಗೆಟ್ಟು ಹೋಗಿವೆ. ಹುಬ್ಬಳ್ಳಿಗೆ ಬಂದವರು ಯಾಕಪ್ಪ ಇಲ್ಲಿಗೆ ಬಂದಿದ್ದೇವೆ ಎನ್ನುವಂತೆ ಮಾಡಿ ಕಳುಹಿಸುತ್ತಿವೆ.
ಬೇಸಿಗೆಯಲ್ಲಿ ಧೂಳು ಹಾರಿಸುವ ರಸ್ತೆಗಳು ಮಳೆ ಬಂದರೆ ಹೊಂಡಮಯವಾಗುತ್ತವೆ. ಭಾರಿ ಮಳೆ ಸಂದರ್ಭದಲ್ಲಿ ಚನ್ನಮ್ಮ ವೃತ್ತ ಹಾಗೂ ಹಳೇ ಬಸ್​ ನಿಲ್ದಾಣದ ಎದುರು ಮೂರ್ನಾಲ್ಕು ಅಡಿ ಎತ್ತರದಲ್ಲಿ ನೀರು ಹರಿಯುತ್ತದೆ. ಇದರಿಂದ ವಾಹನ ಸವಾರರು ತೊಂದರೆ ಪಡುತ್ತಾರೆ. ಅದರಲ್ಲೂ ಬೈಕ್​ ಸವಾರರು, ಪಾದಚಾರಿಗಳು ತೀವ್ರ ಪರದಾಡುತ್ತಾರೆ.
ಎಲ್ಲಿ ತೆಗ್ಗು ಇವೆ, ಗುಂಡಿಗಳು ಇವೆ ಎಂಬುದೇ ಗೊತ್ತಾಗುವುದಿಲ್ಲ. ಎದ್ದು ಬಿದ್ದು ಸಾಗುವ ಪರಿಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಫ್ಲೈಓವರ್​ ಕಾಮಗಾರಿಯು ಕಾಲಮಿತಿಯಲ್ಲಿ ನಡೆಯದ್ದಕ್ಕೆ ಸಾರ್ವಜನಿಕರು ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯದ ಸ್ಥಿತಿ ನೋಡಿದರೆ ಇನ್ನೂ ಒಂದು ವರ್ಷ ಕಾಮಗಾರಿ ನಡೆಯುವ ಸಾಧ್ಯತೆ ಇದೆ.
ಅನೇಕ ಗಟಾರುಗಳು ಹೂಳು ತುಂಬಿಕೊಂಡಿರುವುದರಿಂದ ಬಹುತೇಕ ನೀರು ನಗರದ ರಸ್ತೆಯಲ್ಲಿಯೇ ಹರಿಯುತ್ತದೆ. ಇಲ್ಲಿಯ ಟೆಂಡರ್​ ಶ್ಯೂರ್​ ರಸ್ತೆಯೂ ಇದಕ್ಕೆ ಹೊರತಾಗಿಲ್ಲ. ಮಳೆ ಬಂದರೆ ರಸ್ತೆಯಲ್ಲಿಯೇ ಕೊಳಚೆ, ನೀರು ಎಲ್ಲವೂ ಹರಿಯುತ್ತದೆ. ಚರಂಡಿಗಳು ನಾಮಕಾವಾಸ್ತೆ ಎಂಬಂತಾಗಿವೆ.

ಕೋಡಿ ಹರಿದ ಉಣಕಲ್ಲ ಕೆರೆ

ಹುಬ್ಬಳ್ಳಿಯ ಉಣಕಲ್ಲ ಕೆರೆ ವಿಶೇಷತೆ ಎಂದರೆ ಈ ವರ್ಷ ಮೊದಲ ಮಳೆಯಲ್ಲಿಯೇ ತುಂಬಿ ಹರಿದಿರುವುದು. ಒಳಚರಂಡಿ, ಜಲಾನಯನ ಪ್ರದೇಶದಿಂದ ಹರಿದು ಬರುವ ಚರಂಡಿ ನೀರಿನಿಂದ ಸದಾ ತುಂಬಿಕೊಂಡೇ ಇರುವ ಕೆರೆಯು ಬುಧವಾರದ ಧಾರಾಕಾರ ಮಳೆಗೆ ಕೋಡಿ ಹರಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಸ್ವಲ್ಪವೇ ಮಳೆ ಬಂದರೂ ಕೆರೆ ತುಂಬಿಕೊಳ್ಳುತ್ತಿದೆ. ನಿನ್ನೆಯ ಮಳೆಗೆ ಕೋಡಿ ಹರಿಯುವ ಮೂಲಕ ಉಣಕಲ್​ ಕೆರೆ ಇತಿಹಾಸ ನಿರ್ಮಿಸಿದೆ.