ಹುಬ್ಬಳ್ಳಿ ರೈಲ್ವೆ (Railway) ವಿಭಾಗದಿಂದ ಆಯೋಜಿಸಿದ್ದ ಲೆವೆಲ್ ಕ್ರಾಸಿಂಗ್ ಜಾಗೃತಿ ಸಪ್ತಾಹದ ಕಾರ್ಯಕ್ರಮದಲ್ಲಿ ಅಣ್ಣಿಗೇರಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವ ರೈಲ್ವೆ ಅಧಿಕಾರಿಗಳು.
- ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ
- ಪಾಲಿಸಬೇಕಾದ ಮುಖ್ಯ ಸುರಕ್ಷತಾ ನಿಯಮಗಳು
- ಲೆವೆಲ್ ಕ್ರಾಸಿಂಗ್ ಗೇಟ್ ದಾಟುವಾಗ ಮೊಬೈಲ್ ಬಳಸಬಾರದು
ರೈಲ್ವೆ ಲೆವೆಲ್ ಕ್ರಾಸಿಂಗ್ಗಳಲ್ಲಿ ರಸ್ತೆ ಬಳಕೆದಾರರು ಕಡ್ಡಾಯವಾಗಿ ಪಾಲಿಸಬೇಕಾದ ಮುಖ್ಯ ಸುರಕ್ಷತಾ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿತ್ತು.
ವಿಭಾಗದ ಎಲ್ಲ ಲೆವೆಲ್ ಕ್ರಾಸಿಂಗ್ ಹತ್ತಿರ ಸಾರ್ವಜನಿಕರೊಂದಿಗೆ ಸಂವಾದಗಳನ್ನು ನಡೆಸಿ, ಲೆವೆಲ್ ಕ್ರಾಸಿಂಗ್ ಗೇಟ್ಗಳಲ್ಲಿ ಬಳಸುವ ರೈಲ್ವೆ ಸಂಕೇತಗಳ ಬಳಕೆ, ಪಾಲಿಸುವ ಉದ್ದೇಶ, ಮಹತ್ವ ಮತ್ತು ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ವಿಶೇಷವಾಗಿ ಲೆವೆಲ್ ಕ್ರಾಸಿಂಗ್ ಗೇಟ್ ದಾಟುವಾಗ ಮೊಬೈಲ್ ಬಳಸಬಾರದು ಎಂಬ ಸಂದೇಶ ನೀಡಲಾಯಿತು.
ಲೆವೆಲ್ ಕ್ರಾಸಿಂಗ್ ಹತ್ತಿರದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿಶೇಷ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೈಲು ಚಲಿಸುವಾಗ ಎಲ್ಸಿ ಗೇಟ್ ಹತ್ತಿರ ವಿದ್ಯಾರ್ಥಿಗಳು ನಿಯಮಿತ ಅಂತರ ಕಾಯ್ದುಕೊಳ್ಳುವಂತೆ ಮಾಹಿತಿ ನೀಡಲಾಯಿತು.
ಗ್ರಾಮಸ್ಥರಿಗೆ ಮುಚ್ಚಿರುವ ಲೆವೆಲ್ ಕ್ರಾಸಿಂಗ್ ಗೇಟ್ ದಾಟಬಾರದು, ರೈಲು ಸಂಚಾರಕ್ಕಾಗಿ ಎಲ್ಸಿ ಗೇಟ್ ಮುಚ್ಚಿದ್ದಾಗ ಗೇಟಮನ್ಗೆ ಯಾವುದೇ ರೀತಿಯಲ್ಲಿ ಗೇಟ್ ತೆರೆಯುವಂತೆ ಹೇಳಬಾರದು ಎಂದು ತಿಳಿಸಲಾಯಿತು. ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಸಂವಾದ ನಡೆಸಲಾಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಅವರ ಮಾರ್ಗದರ್ಶನದಲ್ಲಿ ನಡೆದ ಈ ಸಪ್ತಾಹದಲ್ಲಿ ಹುಬ್ಬಳ್ಳಿ ವಿಭಾಗದ ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ. ಆರ್. , ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.