ಜೆಎಸ್ಎಸ್ 
ಧಾರವಾಡ

ಶಿಕ್ಷಕರ ತರಬೇತಿಗಳಿಂದ ಗುಣಮಟ್ಟ ವೃದ್ಧಿ

ಜಗದೀಶ ಹೊಂಬಳಿ
ಧಾರವಾಡ: ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಮಾತ್ರ ನೀಡುತ್ತಿಲ್ಲ. ಸಾಧನೆಗೆ ದಾರಿದೀಪವಾಗುತ್ತ ಉತ್ತಮ ಸಮಾಜ ರೂಪಿಸುತ್ತಿದ್ದಾರೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಜೆಎಸ್‌ಎಸ್ ಎಲ್ಲ ಶಾಲೆಗಳ ಶಿಕ್ಷಕರಿಗೆ ಬೆಂಗಳೂರಿನ ವಿಸ್ತಾರಾ ಗ್ಲೋಬಲ್ ಟೀಚರ್ಸ್ ಟ್ರೇನಿಂಗ್ ಅಕಾಡೆಮಿ ಜತೆಗೂಡಿ ಆಯೋಜಿಸಿದ್ದ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಶಿಸ್ತು, ಸಮಯ ಪಾಲನೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮ ಬೆಳೆಸುತ್ತಾರೆ. ಅತಿ ವೇಗವಾಗಿ ಬೆಳೆಯುತ್ತಿರುವ ಈ ಯುಗದಲ್ಲಿ ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿ ಕೊಡಿಸುವುದರಿಂದ ಹೊಸ ಬೋಧನಾ ವಿಧಾನಗಳನ್ನು ಕಲಿತು ವಿದ್ಯಾರ್ಥಿಗಳಿಗೆ ಸುಲಭವಾಗಿ ಪಾಠ ಹೇಳಲು ಸಾಧ್ಯವಾಗುತ್ತದೆ ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಸ್ತಾರಾ ಗ್ಲೋಬಲ್ ಟೀಚರ್ಸ್ ಟ್ರೇನಿಂಗ್ ಅಕಾಡೆಮಿ ಮಹೇಶ ಮಾಶಾಳ ಮಾತನಾಡಿ, ಎಲ್ಲ ಶಿಕ್ಷಕರಿಗೂ ಸಮಾಜಕ್ಕೆ ಒಳ್ಳೆಯದನ್ನು ನೀಡುವ ಸಾಮರ್ಥ್ಯವಿದೆ. ಆದರೆ ಮಾರ್ಗದರ್ಶನ, ಮಾಹಿತಿ ಮತ್ತು ಸರಿಯಾದ ಪಠ್ಯಕ್ರಮದ ಕೊರತೆಯಿಂದ ಶಿಕ್ಷಕರ ಸಾಧನೆಯಲ್ಲಿ ಕೊರೆತೆ ಕಾಣುತ್ತಿದೆ. ಕಾರ್ಯಾಗಾರದಲ್ಲಿ ಶಿಕ್ಷಕರು ಪಾಲ್ಗೊಂಡು ಕಾರ್ಯಕ್ಷಮತೆ ಜಾಗೃತಗೊಳಿಸಿಕೊಳ್ಳಬೇಕು ಎಂದರು.
ಜೆಎಸ್‌ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿ, ಮಕ್ಕಳು ಪಾಲಕರ ಭವಿಷ್ಯದ ಕನಸುಗಳು, ಆ ಕನಸುಗಳನ್ನು ನೈತಿಕ ನೆಲಗಟ್ಟಿನಲ್ಲಿ ಸರಿಯಾದ ಮಾರ್ಗದರ್ಶನದಿಂದ ಸಾಕಾರಗೊಳಿಸಬೇಕಾದುದು ಶಿಕ್ಷಕರ ಕರ್ತವ್ಯ ಎಂದು ಹೇಳಿದರು.
ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಜೆಎಸ್‌ಎಸ್ ಐಟಿಐ ಕಾಲೆಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಜೆಎಸ್‌ಎಸ್ ಎಲ್ಲ ಶಾಲೆಯ ಮುಖ್ಯಸ್ಥರು ವೇದಿಕೆಯಲ್ಲಿದ್ದರು. ವಾಣಿಶ್ರೀ ನಿರೂಪಿಸಿದರು.