ಜಿಲ್ಲಾಧಿಕಾರಿ ಸ್ನೇಹಲ್ ಆರ್.  
ಧಾರವಾಡ

ಫೆ. 28ರಿಂದ ಮಾ. 17ರವರೆಗೆ ಪಿಯುಸಿ ಪರೀಕ್ಷೆ

ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆ. 28ರಿಂದ ಮಾ. 17ರವರೆಗೆ ನಡೆಯಲಿವೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಜರುಗಲಿವೆ. ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 176 ಕಾಲೇಜುಗಳಿಂದ ಪರೀಕ್ಷೆಗೆ 12,665 ಹಡುಗರು ಹಾಗೂ 14,289 ಹುಡುಗಿಯರು ಸೇರಿ ಒಟ್ಟು 26,954 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಈ ಪೈಕಿ 11,269 ಹುಡುಗರು ಹಾಗೂ 13,445 ಹುಡುಗಿಯರು ಸೇರಿ 24,714 ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಪುರಾವರ್ತಿತ ಹಡುಗರು 1,234 ಹಾಗೂ 682 ಹುಡುಗಿಯರು ಹಾಜರಾಗುತ್ತಿದ್ದಾರೆ. 150 ಹುಡುಗರು ಹಾಗೂ 148 ಹುಡುಗಿಯರು ಬಾಹ್ಯ ವಿದ್ಯಾರ್ಥಿಗಳಾಗಿ ಹಾಜರಾಗುತ್ತಿದ್ದಾರೆ. ಫಲಿತಾಂಶ ಸುಧಾರಣೆಗಾಗಿ 12 ಹುಡುಗರು ಮತ್ತು 14 ಹುಡುಗಿಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
43 ಪಿಯುಸಿ ಪರೀಕ್ಷಾ ಕೇಂದ್ರಗಳು:
ಜಿಲ್ಲೆಯಲ್ಲಿ 43 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಧಾರವಾಡದಲ್ಲಿ 16, ಹುಬ್ಬಳ್ಳಿ 18, ಅಳ್ನಾವರ 01, ಕಲಘಟಗಿ 02, ಕುಂದಗೋಳ 03, ನವಲಗುಂದ 02 ಹಾಗೂ ಅಣ್ಣಿಗೇರಿಯಲ್ಲಿ 01 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗಿದೆ. ಪರೀಕ್ಷಾ ಸಂಬಂಧಿತ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಜಿಲ್ಲಾ ಖಜಾನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24*7 ಸಿಸಿಟಿವಿ ಕ್ಯಾಮರಾ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮುಖ್ಯಾಧಿಕಾರಿಗಳನ್ನು ಹೊರತುಪಡಿಸಿ, ಉಳಿದ ಸಿಬ್ಬಂದಿ ಮೊಬೈಲ್ ಫೋನ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಂತಿಲ್ಲ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸುದ್ದಿಗೋಷ್ಠಿಯಲ್ಲಿದ್ದರು.
ಉಚಿತ ಬಸ್ ವ್ಯವಸ್ಥೆ
ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ, ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.
ಪರೀಕ್ಷಾ ವೇಳಾಪಟ್ಟಿ
ಫೆ. 28ರಂದು ಕನ್ನಡ ಮತ್ತು ಅರೆಬಿಕ್ ವಿಷಯ, ಮಾ. 2ರಂದು ಭೂಗೋಳಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ಮನಃಶಾಸ್ತ್ರ, ಮಾ. 3 ರಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಲಿವೆ.
ಮಾ. 4ರಂದು ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್, ಮಾ. 5ರಂದು ಇತಿಹಾಸ, ಮಾ. 6ರಂದು ಭೌತಶಾಸ್ತ್ರ, ಮಾ. 7ರಂದು ಐಚ್ಚಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ ಮತ್ತು ಮಾ. 9ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ ಮತ್ತು ಮೂಲ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ. ಮಾ. 10ರಂದು ಅರ್ಥಶಾಸ್ತ್ರ, ಮಾ. 11ರಂದು ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹವಿಜ್ಞಾನ, ಮಾ. 12ರಂದು ಹಿಂದಿ, ಮಾ. 13ರಂದು ರಾಜ್ಯಶಾಸ್ತ್ರ, ಮಾ. 14ರಂದು ಲೆಕ್ಕಶಾಸ್ತ್ರ, ಗಣಿತ, ಮಾ. 16ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ, ಮಾ. 17ರಂದು ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ ಮತ್ತು ಯಂತ್ರಾಂಶ ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ ರೀಟೈಲ್, ಆಟೋಮೊಬೈಲ್ ಹೆಲ್ತ್ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್ ಪರೀಕ್ಷೆ ನಡೆಯಲಿವೆ.