Award ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತ ಪಂ. ಪ್ರವೀಣ ಗೋಡಖಿಂಡಿ ಅವರು ಕೊಳಲು ನುಡಿಸಿದರು. ಅವರಿಗೆ ತಬಲಾದಲ್ಲಿ ಹೇಮಂತ ಜೋಶಿ ಹಾಗೂ ಕೊಳಲಿನಲ್ಲಿ ಮಧು ಕುಲಕರ್ಣಿ ಸಾಥ್ ನೀಡಿದರು. 
ಧಾರವಾಡ

ಪಂ. ಪ್ರವೀಣ ಗೋಡಖಿಂಡಿಗೆ ಕೃಷ್ಣಾ ಹಾನಗಲ್ ಪ್ರಶಸ್ತಿ Award

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿದ ಪದ್ಮಶ್ರೀ ವೆಂಕಟೇಶ ಕುಮಾರ.
  • ಮಕ್ಕಳಿಗೆ ಚಿಕ್ಕವರಿಂದಾಗಿಂದಲೇ ಶಾಸ್ತ್ರೀಯ ಸಂಗೀತದ ರುಚಿ ಬೆಳೆಸಬೇಕು.
  • ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ವಾತಾವರಣ ನಿರ್ವಿುಸುವ ಶಕ್ತಿ ಧಾರವಾಡಕ್ಕೆ ಇದೆ.
ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸಿಂಪೋನಿ ಸಂಗೀತ ಸಂಸ್ಥೆಯ ಸಹಯೋಗದಿಂದಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪಂಡಿತ ಎಂ. ವೆಂಕಟೇಶ ಕುಮಾರ ಅವರು ಪಂ. ಪ್ರವೀಣ ಗೋಡಖಿಂಡಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ. ಪ್ರವೀಣ ಗೋಡಖಿಂಡಿ ಮಾತನಾಡಿ, ಉತ್ತರ ಕರ್ನಾಟಕದ ಈ ಭಾಗದಿಂದ ಗಾಯಕರಷ್ಟೇ ಅಲ್ಲ, ಕೊಳಲು ಸೇರಿದಂತೆ ಇನ್ನಿತರ ವಾದ್ಯಗಳ ವಾದಕರೂ ಬೆಳೆಯುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ವಾತಾವರಣ ನಿರ್ವಿುಸುವ ಶಕ್ತಿ ಧಾರವಾಡಕ್ಕೆ ಇದೆ ಎಂದು ಹೇಳಿದರು.
ಮಕ್ಕಳಿಗೆ ಚಿಕ್ಕವರಿಂದಾಗಿಂದಲೇ ಶಾಸ್ತ್ರೀಯ ಸಂಗೀತದ ರುಚಿ ಬೆಳೆಸಬೇಕು. ಶಾಸ್ತ್ರೀಯ ಸಂಗೀತ ಕಲಾವಿದರನ್ನು ಬೆಳೆಸೋಣ ಎಂದು ಸಲಹೆ ನೀಡಿದರು.
ನನಗೆ ಸಲ್ಲುತ್ತಿರುವ ಪ್ರಶಸ್ತಿಗಳು, ಗೌರವಗಳು ದೊರೆಯಬೇಕಿರುವುದು ನನ್ನ ತಂದೆ ಪಂ. ವೆಂಕಟೇಶ ಗೋಡಖಿಂಡಿ ಅವರಿಗೆ. ಅವರು ಧಾರವಾಡದ ಮಣ್ಣಿನಿಂದ ಬಂದ ಅಪ್ರತೀಮ ಕಲಾವಿದರು. ಕೊಳಲು ನುಡಿಸುವ ಜತೆಗೆ ಹಾಡು ಸಹ ಹಾಡುತ್ತಿದ್ದರು. ಅವರಿಗೆ ವಿವಿಧ ಘರಾಣೆಗಳ ಅಪಾರ ಜ್ಞಾನ ಇತ್ತು ಎಂದರು.
ತಂದೆಯೇ ನನಗೆ ಗುರುವಾಗಿದ್ದದ್ದು ನನ್ನ ಸೌಭಾಗ್ಯ. ಅವರು ಏಕಲವ್ಯನಂತೆ ಸ್ವತಂತ್ರವಾಗಿ ಕೊಳಲು ನುಡಿಸುವುದನ್ನು ಕಲಿತರು.
ಕೊಳಲಿನಲ್ಲಿ ಪಂಚಮ ರಾಗಕ್ಕೆ ಹೆಬ್ಬೆಟ್ಟಿಗೂ ಒಂದು ರಂದ್ರವನ್ನು ಸಂಶೋಧನೆ ಮಾಡಿದ್ದು ನನ್ನ ತಂದೆ. ಇದೀಗ, ಬಹುತೇಕ ಕಲಾವಿದರು ಕೊಳಲು ನುಡಿಸುವಾಗ ಹೆಬ್ಬೆಟ್ಟಿನ ರಂದ್ರ ಉಪಯೋಗಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ. ಎಂ. ವೆಂಕಟೇಶ ಕುಮಾರ, ಸಂಗೀತ ವಿದ್ಯಾರ್ಥಿಗಳು ತಮ್ಮ ಗುರುಗಳಿಂದ ಕೇವಲ ಸಂಗೀತದ ಪಾಠ ಕಲಿಯಬಾರದು. ಗುರುಗಳಲ್ಲಿನ ಗುಣಗಳನ್ನು ಸಹ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಕಲಾವಿದರಾಗುವ ಜತೆಗೆ ಅತ್ಯುತ್ತಮ ವ್ಯಕ್ತಿತ್ವ ವಿಕಸನವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಪಂ. ಪ್ರವೀಣ ಗೋಡಖಿಂಡಿ ಅವರಿಗೆ ಭವಿಷ್ಯದಲ್ಲಿ ಪದ್ಮ ಪ್ರಶಸ್ತಿಗಳು ಲಭಿಸಲಿ. ಅವರು ಕೊಳಲು ವಾದನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ಮುಂಬೈನ ಎಂಸಿಜಿಎಂ ನಿವೃತ್ತ ಸಹಾಯಕ ಆಯುಕ್ತ ಉದಯಕುಮಾರ ಶಿರೂರಕರ ಮಾತನಾಡಿ, ವೃಂದಾವನದಲ್ಲಿ ಶ್ರೀಕೃಷ್ಣನ ಕೊಳಲು ನುಡಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರನ್ನೂ ಮೋಡಿ ಮಾಡಿತ್ತು. ಹೀಗಾಗಿ, ಎಲ್ಲರಿಗೂ ಕೊಳಲು ನುಡಿಯ ಅರಿವು ಇದೆ ಎಂದು ಹೇಳಿದರು.
ಮತ್ತೊಬ್ಬ ಅತಿಥಿ ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯದ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿದರು.
ನಂತರ ಪಂ. ಪ್ರವೀಣ ಗೋಡಖಿಂಡಿ ಅವರು ಮಾರು ಬಿಹಾಗ್ ರಾಗದಲ್ಲಿ ಸುಮಾರು ಒಂದು ತಾಸಿನವರೆಗೆ ಕೊಳಲು ನುಡಿಸಿದರು. ಅವರಿಗೆ ತಬಲಾದಲ್ಲಿ ಹೇಮಂತ ಜೋಶಿ ಹಾಗೂ ಕೊಳಲಿನಲ್ಲಿ ಮಧು ಕುಲಕರ್ಣಿ ಸಾಥ್ ನೀಡಿದರು. ಪ್ರವೀಣ ಗೋಡಖಿಂಡಿ ಅವರ ಕೊಳಲು ವಾದನ ಆಲಿಸಿದ ಪ್ರೇಕ್ಷಕರು, ಮಂತ್ರಮುಗ್ಧರಾದರು.
ಇದಕ್ಕೂ ಮೊದಲು ಕೋಮಲ ನಾಡಿಗೇರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಸಿಂಪೋನಿ ಸಂಗೀತ ಸಂಸ್ಥೆಯ ಸಂತೋಷ ಮೊಕಾಶಿ, ವೈಷ್ಣವಿ ಹಾನಗಲ್, ಮಹೇಶ ಹಾನಗಲ್, ವಿನಯ ನಾಯಕ, ಧಿರೇಂದ್ರ ಥಕ್ಕರ, ವೀಣಾ ಹಾನಗಲ್ ಹಾಗೂ ಇತರರು ಇದ್ದರು.