ಎಸ್‌ಯುಸಿಐನಿಂದ ಪ್ರತಿಭಟನೆ 
ಧಾರವಾಡ

ಎಸ್‌ಯುಸಿಐನಿಂದ ಪ್ರತಿಭಟನೆ

ಜಗದೀಶ ಹೊಂಬಳಿ
ಧಾರವಾಡ: ರೈಲ್ವೆ ಟಿಕೆಟ್ ದರ ಹೆಚ್ಚಳ ಕೈ ಬಿಡುವಂತೆ ಆಗ್ರಹಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಇಂಡಿಯಾ (ಎಸ್‌ಯುಸಿಐ-ಸಿ) ಸಂಘಟನೆಯಿoದ ನಗರದ ರೈಲು ನಿಲ್ದಾಣದ ಪ್ರವೇಶ ದ್ವಾರದ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಈ ವೇಳೆ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಲಕ್ಷಣ ಜಡಗನ್ನವರ ಮಾತನಾಡಿ, ಜನತೆಯ ತೆರಿಗೆ ಹಣದಿಂದ ನಿರ್ಮಿಸಿದ ಈ ಬೃಹತ್ ರೈಲ್ವೆ ವಲಯವು ಜನತೆಗೆ ಸೇವೆ ಒದಗಿಸುವ ಸೇವಾ ವಲಯವಾಗಿದೆ. ಆದರೆ, ಸಿಬ್ಬಂದಿ ವೆಚ್ಚದ ಆರ್ಥಿಕ ಹೊರೆ ಪೂರೈಸುವ ಕುಂಟು ನೆಪಮೊಡ್ಡಿ, ಇಂದಿನಿoದ ಜಾರಿಗೆ ಬರುವಂತೆ ಸಾಮಾನ್ಯ ವರ್ಗದಿಂದ ಎಸಿ ವರ್ಗದವರೆಗೆ ಎಲ್ಲ ಶ್ರೇಣಿಗಳ ರೈಲು ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಮತ್ತು ಅನಿಯಂತ್ರಿತವಾಗಿ ಹೆಚ್ಚಿಸಿದ ನೀತಿಯು ಅತ್ಯಂತ ಜನವಿರೋಧಿಯಾಗಿದೆ. ಇಂಥದ್ದೇ ನೆಪಮೊಡ್ಡಿ ಈ ಹಿಂದೆಯೂ ಏರಿಕೆ ಮಾಡಲಾಗಿತ್ತು. ಇನ್ನೊಂದೆಡೆ ರೈಲು ಪ್ರಯಾಣವು ಇಂದಿಗೂ ದುಸ್ವಪ್ನವಾಗಿಯೇ ಮುಂದುವರೆದಿದೆ. ರೈಲು ಅಪಘಾತಗಳು ಹೆಚ್ಚುತ್ತಿವೆ, ಸಮಯ ಪಾಲನೆಯಾಗುತ್ತಿಲ್ಲ. ರೈಲು ಬೋಗಿಗಳ ನಿರ್ವಹಣೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಶೌಚಗೃಹ ನೈರ್ಮಲ್ಯ ಹದಗೆಟ್ಟಿದೆ. ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಆಹಾರ ದುಬಾರಿಯಾಗಿದ್ದರೂ ಗುಣಮಟ್ಟವು ಅತ್ಯಂತ ಕಳಪೆಯಾಗಿದೆ. ಪ್ರಯಾಣಿಕರ ಸುರಕ್ಷತೆಯು ಅಪಾಯದಲ್ಲಿದೆ. ಈ ಸಮಸ್ಯೆ ಪರಿಹರಿಸುವ ಬದಲು, ಪದೇಪದೆ ಟಿಕೆಟ್ ದರ ಏರಿಕೆ ಮಾಡುವ ಮೂಲಕ ಪ್ರಯಾಣಿಕರನ್ನು ಹಿಂಡಿ ಹಿಪ್ಪೆ ಮಾಡುವುದು ಮತ್ತು ಆದಾಯ ಹೆಚ್ಚಿಸಿಕೊಳ್ಳುವುದು ಮಾತ್ರ ಸರ್ಕಾರದ ಕಾಳಜಿಯಾಗಿದೆ. ಈ ಪ್ರಸ್ತಾವಿತ ದರ ಏರಿಕೆಯಿಂದ ಸರ್ಕಾರದ ಖಜಾನೆಗೆ ಸುಮಾರು 600 ಕೋಟಿ ರೂ. ಹೆಚ್ಚುವರಿಯಾಗಿ ಹರಿದು ಬರಲಿದೆ. ಆದರೆ ಪ್ರಯಾಣಿಕರ ಕಷ್ಟಗಳು ಮಾತ್ರ ಅಬಾಧಿತವಾಗಿ ಮುಂದುವರಿಯಲಿವೆ. ಕೇಂದ್ರ ಸರ್ಕಾರ ಈ ದರ ಏರಿಕೆ ಹಿಂಪಡೆಯಬೇಕು. ಅಸ್ತಿತ್ವದಲ್ಲಿರುವ ಪ್ರಯಾಣ ವೆಚ್ಚ ಕಡಿಮೆ ಮಾಡಲು ಮತ್ತು ಪ್ರಯಾಣಿಕರ ಸುರಕ್ಷತೆ, ಸಮಯಪಾಲನೆ ಹಾಗೂ ಸೂಕ್ತ ಸೌಲಭ್ಯಗಳನ್ನು ಹೆಚ್ಚಿಸಬೇಕು. ಸಾಮಾನ್ಯ ಹಾಗೂ ಸ್ಲಿಪ್ಪರ್ ಕೋಚ್ ಬೋಗಿಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸ್ಟೇಷನ್ ಮಾಸ್ಟರ್ ಮೂಲಕ ಕೇಂದ್ರ ಸಚಿವ ಅಶ್ವಿನ ವೈಷ್ಣವ್ ಅವರಿಗೆ ರವಾನಿಸಲಾಯಿತು.
ಗಂಗಾಧರ್ ಬಡಿಗೇರ, ತಾಯಿದಾಸ್ ಎಂ.ಬಿ., ದೀಪಾ ಧಾರವಾಡ, ಶರಣು ಗೋನವಾರ, ಮಧುಲತಾ ಗೌಡರ, ಭವಾನಿಶಂಕರ ಗೌಡರ, ಗಂಗಾ ಕೊಕರೇ, ದೇವಮ್ಮ, ಶಶಿಕಲಾ, ಸಿಂಧು ಇತರರಿದ್ದರು.