ಪ್ರಮುಖ ರಸ್ತೆಗಳಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ  
ಧಾರವಾಡ

ದಲಿತ ಸಂಘಟನೆಗಳಿಂದ ಬೃಹತ್​ ಪ್ರತಿಭಟನೆ

ಮಂಜುನಾಥ ಅಂಗಡಿ
ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಿಸಬೇಕು ಎಂಬ ಸಾರ್ವಜನಿಕರ ಕೂಗು ಮತ್ತಷ್ಟು ತೀವ್ರಗೊಂಡಿದೆ. ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಮುಖ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತ್ಯೇಕ ಪಾಲಿಕೆ ರಚನೆಗೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಮ್ಮ ಶರ್ಟ್​ ಬಿಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇವೇಳೆ ಸ್ಥಳಿಯ ಜನಪ್ರತಿನಿಧಿಗಳಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಕ್ಕೂಟದ ಪ್ರಮುಖರಾದ ಪರಮೇಶ್ವರ ಕಾಳೆ, ತುಳಜಪ್ಪ ಪೂಜಾರ ಹಾಗೂ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಯ ಕೂಗಿಗೆ ವಿವಿಧ ಸಂಘಟನೆಗಳು ಮುಂಚೂಣಿಗೆ ಬಂದು ಧ್ವನಿಗೂಡಿಸಿದವು. ಹೋಟೆಲ್​ ಮಾಲೀಕರ ಸಂಘದ ಮಹೇಶ ಶೆಟ್ಟಿ, ಗಿರೀಶ ಶೆಟ್ಟಿ, ಇತರರು ಹೋರಾಟಕ್ಕೆ ಸಾಥ್​ ನೀಡಿದರು. ಕರ್ನಾಟಕ ವಿದ್ಯುತ್​ ಗುತ್ತಿಗೆದಾರರ ಸಂಘದ ಪ್ರೇಮಸಾಗರ ಗಸ್ತೆ, ಮೆಹಬೂಬ ಮುಲ್ಲಾನವರ ಹಾಗೂ ಮಂಜೂರ್​ಖಾನ್​ ಭಾಗವಹಿಸಿದರು. ಪ್ರಶಾಂತನಗರದ ಕಲ್ಯಾಣ ಸಂಘದ ಬಾಬಣ್ಣ ಇಳಗೇರ ತಮ್ಮ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು.
* ಉಗ್ರ ಹೋರಾಟದ ಎಚ್ಚರಿಕೆ
ಧಾರವಾಡದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಪಾಲಿಕೆ ಅತ್ಯಗತ್ಯ. ರಾಜ್ಯಪಾಲರು ಇನ್ನ ಕಾಲಹರಣ ಮಾಡದೆ, ಶಿಫಾರಸಿಗೆ ಅನುಮೋದನೆ ನೀಡಬೇಕು. ಈ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೋರಾಟವನ್ನು ಇನ್ನಷ್ಟು ಉಗ್ರಗೊಳಿಸಲಾಗುವುದು ಹೋರಾಟನಿರತರು ಎಚ್ಚರಿಕೆ ನೀಡಿದ್ದಾರೆ.