ಕುಂದಗೋಳದ ಪಟ್ಟಣದಲ್ಲಿ ಶ್ರೀ ಕಾಡಶಿದ್ದೇಶ್ವರ ಸ್ವಾಮಿಗಳ ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಪಟ್ಟಣದ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ಗಾಳಿ ಮರೇಮ್ಮ ದೇವಸ್ಥಾನದ ಬಳಿ ಶ್ರೀಗಳ ಭಾವಚಿತ್ರ ಹಿಡಿದು ಸಾವಿರಾರು ಭಕ್ತರು ಬೃಹತ್ ಪ್ರತಿಭಟನೆ ಮಾಡಿದರು. 
ಧಾರವಾಡ

ಕನೇರಿ ಶ್ರೀ ವಿಜಯಪುರ ಪ್ರವೇಶ ನಿರ್ಬಂಧ ತೆರವಿಗೆ ಪಟ್ಟು

ಮಂಜುನಾಥ ಗದಗಿನ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿ
  • ನೂರಾರು ಭಕ್ತರಿಂದ ಶ್ರೀಗಳ ಭಾವಚಿತ್ರ ಹಿಡಿದು ಪ್ರತಿಭಟನೆ
  • ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಹೇರಿರುವ ನಿರ್ಬಂಧ
ವಿಜಯವಾಣಿ ಸುದ್ದಿಜಾಲ ಕುಂದಗೋಳ
ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ಹೇರಿರುವ ನಿರ್ಬಂಧವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಮಂಗಳವಾರ ಕುಂದಗೋಳದಲ್ಲಿ ಬಸವಾದಿ ಶರಣರ ಹಿಂದು ವೇದಿಕೆ ಆಶ್ರಯದಲ್ಲಿ ಶ್ರೀಗಳ ಭಾವಚಿತ್ರ ಹಿಡಿದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಶಾಸಕ ಎಂ.ಆರ್. ಪಾಟೀಲ್ ಮಾತನಾಡಿ, ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಧರ್ಮ ಉಳಿಸಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಸಿಕೊಟ್ಟ ಗುರುಗಳು. ಅವರ ಮಾತನ್ನು ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಕೇಳುತ್ತವೆ. ಆದರೆ, ಅಂತಹ ಪೂಜ್ಯರಿಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿರುವುದು ದುರ್ದೈವದ ಸಂಗತಿ. ಸ್ವಾಮೀಜಿಗಳು ದೇಶೀಯ ಕೃಷಿಗೆ ಒತ್ತು ನೀಡುತ್ತಿದ್ದು, ಇದನ್ನು ನೋಡಲು ದೇಶ-ವಿದೇಶಗಳಿಂದಲೂ ಜನರು ಆಗಮಿಸುತ್ತಾರೆ. ಇಂತಹ ಪೂಜ್ಯರ ಮೇಲೆ ಹೇರಿರುವ ನಿರ್ಬಂಧವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಶ್ರೀಗಳ ವಿರುದ್ಧ ಸಂಚು:

ಶಿವಯೋಗೀಶ್ವರ ಮಹಾಸ್ವಾಮೀಜಿ ಮಾತನಾಡಿ, ಶ್ರೀಗಳ ವಿರುದ್ಧ ಸಂಚು ನಡೆಯುತ್ತಿದೆ. ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ರೈತರಿಗೆ ದೇಶೀಯ ಬೀಜಗಳಿಗೆ ಉತ್ತೇಜನ ನೀಡುವ ಸಲಹೆ ನೀಡುತ್ತಿದ್ದಾರೆ. ಅವರು ವಿಜಯಪುರ ಜಿಲ್ಲೆಯ ಶೈಲಿಯ ಭಾಷೆಯಲ್ಲಿ ಮಾತನಾಡಿದ್ದನ್ನು ತಿರುಚಿ, ಅವರ ಮೇಲೆ ಕೆಟ್ಟ ಹೆಸರು ತರಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲನ ಎಂದರು.
ಹೋರಾಟ ನಿರಂತರ:
ರಾಮನಕೊಪ್ಪ ಗ್ರಾಮದ ಭಕ್ತೆ ರೂಪಾ ಬಾದಿ ಮಾತನಾಡಿ, ರಾಮನಕೊಪ್ಪ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು. ಆ ಊರಿನಲ್ಲಿ ಇಂದು ಆಧ್ಯಾತ್ಮಿಕ ಪ್ರವಚನ ಮತ್ತು ಯುಗಾದಿ ಕಾರ್ಯಕ್ರಮ ನಡೆಯುತ್ತಿದೆ ಎಂದರೆ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳಿಂದ. ಅವರ ಮೇಲೆ ಹೇರಿರುವ ನಿರ್ಬಂಧ ಹಿಂಪಡೆಯುವವರೆಗೂ ಹೋರಾಟ ನಿರಂತ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶಿವಾನಂದ ಮಠದ ಶ್ರೀ, ಶಿವಶರಣಾನಂದ ಶ್ರೀ, ಗಿರೀಶಾನಂದ ಸ್ವಾಮೀಜಿ, ಅಭಯಾನಂದ ಶ್ರೀ, ಅಕ್ಕಮಹಾದೇವಿ ತಾಯಿ, ಸಾಸ್ವಿಹಳ್ಳಿಯ ಶ್ರೀ ಕಸ್ತೂರೆಮ್ಮ ಮಾತಾ, ಅರವಿಂದಪ್ಪ ಕಟಗಿ, ವೀರಶೈವ ಮಹಾಸಭೆ ತಾಲೂಕಾಧ್ಯಕ್ಷ ಉಮೇಶ ಹೆಬಸೂರ, ಮಲ್ಲಿಕಾರ್ಜುನ ಬಾಳಿಕಾಯಿ, ನಿಂಗಪ್ಪ ಜಟಾರ, ಯಶೋದಾ ಸಂಬೋಜಿ ಸೇರಿದಂತೆ ಇತರರಿದ್ದರು.
"

ಸರ್ಕಾರವು ಸ್ವಾಮೀಜಿಗಳ ಮಧ್ಯೆ ಕದನ ಏರ್ಪಡಿಸುವಂತಹ ಹೀನಾಯ ಕೆಲಸ ಮಾಡುತ್ತಿದೆ. ಈ ಪ್ರತಿಭಟನೆಯು ಕೇವಲ ಕುಂದಗೋಳದಿಂದ ಬಂದ ಸಾಮಾನ್ಯ ಮನವಿ ಎಂದು ಸರ್ಕಾರ ತಿಳಿದುಕೊಳ್ಳಬಾರದು. ಈ ನೋವಿನ ಪರಿಣಾಮವಾಗಿ ಯಾವುದೇ ಪಕ್ಷಭೇದ, ಜಾತಿ-ಮತ ಎನ್ನದೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದಾರೆ. ಇದು ಬರೀ ಮನವಿ ಅಲ್ಲ, ಇಂದೊಂದು ಹೋರಾಟ, ನಾಳೆ ಈ ಹೋರಾಟ ಎಲ್ಲಿಗೆ ಮುಟ್ಟುತ್ತದೆ ಎಂಬುದನ್ನು ಊಹಿಸಲೂ ಆಗುವುದಿಲ್ಲ.