ಧಾರವಾಡ ಕಾರಾಗೃಹ ಬಂಧಿಗಳಿಂದ ತಲೆ ದಂಡ ನಾಟಕ ಪ್ರದರ್ಶನ ನಡೆಯಿತು.
ಧಾರವಾಡ: ಕೋಪ, ಆವೇಶ, ಮತ್ಸರದಿಂದ ಶಿಕ್ಷೆ ಅನುಭವಿಸುತ್ತಿರುವ ಬಂಽಗಳಲ್ಲಿರುವ ಕಲೆ ಗುರುತಿಸಿ, ವೇದಿಕೆ ಕಲ್ಪಿಸುವ ಮೂಲಕ ಅವರಿಗೆ ಉತ್ತಮ ನಾಗರಿಕರಾಗಿ ಜೀವಿಸಲು ಅವಕಾಶವನ್ನು ಕಾರಾಗೃಹದಲ್ಲಿ ನೀಡಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎನ್.ವಿ. ವಿಜಯ ಅವರು ಹೇಳಿದರು.
ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ಕಾರಾಗೃಹ ಮತ್ತು ಸುಧಾರಣ ಸೇವೆಗಳ ಇಲಾಖೆ, ಕೇಂದ್ರ ಕಾರಾಗೃಹ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಂಗಾಯಣ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅನಕ್ಷರಸ್ಥ ಬಂಧಿಗಳಿಗೆ ಈಚೆಗೆ ಹಮ್ಮಿಕೊಂಡಿದ್ದ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಂದು ಕ್ಷಣದ ಉದ್ವೇಗವು ಮನುಷ್ಯನ ಜೀವನವನ್ನು ನಾಶ ಮಾಡುತ್ತದೆ. ಈಗಾಗಲೇ ಶಿಕ್ಷೆ ಅನುಭವಿಸುತ್ತಿರುವ ಬಂಽಗಳಿಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಕಾರಾಗೃಹದಲ್ಲಿ ಹಲವಾರು ಕಾರ್ಯಕ್ರಮ, ಯೋಜನೆ ಹಾಗೂ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದಲಾವಣೆ ಹೊಂದಿ ಹೊರಗಡೆ ಉತ್ತಮ ಜೀವನ ನಡೆಸಬೇಕು. ಉಚಿತ ಕಾನೂನು ಸೇವೆ ಸಹ ಪಡೆದುಕೊಳ್ಳಲು ಅವಕಾಶವಿದೆ. ಅದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಬಂಽಗಳಲ್ಲಿರುವ ಪ್ರತಿಭೆ, ಕ್ರಿಯಾಶೀಲತೆ ಗುರುತಿಸಿ ಅವರ ಕಲೆಗೆ ವೇದಿಕೆ ರೂಪಿಸಿಕೊಟ್ಟಿದೆ. ಇಂತಹ ಕಲೆಗಳು ಕೇವಲ ಮನರಂಜನೆಗಾಗಿ ಮಂತ್ರವಲ್ಲ, ಅವುಗಳಿಂದ ಜೀವನದ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಯಾವುದೋ ಕಾರಣಗಳಿಂದ ಮಾಡಿದಂತಹ ತಪ್ಪುಗಳಿಗೆ ಶಿಕ್ಷೆ ಅನುಭವಿಸುತ್ತಿರುವ ಬಂಽಗಳಿಗೆ ಕಾರಾಗೃಹದಲ್ಲಿ ಶಿಕ್ಷೆಗಿಂತ ಪರಿವರ್ತನೆ ಹೊಂದಲು ಅವಕಾಶವನ್ನು ಕಲ್ಪಿಸಿದೆ. ಕೈಮಗ್ಗ, ಕುಶಲ ಕೈಗಾರಿಕೆ ಸೇರಿ ಹಲವು ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಕಾರಾಗೃಹದಿಂದ ಬದಲಾವಣೆಯೊಂದಿಗೆ ಸುಧಾರಿತ ಪ್ರಜೆಯಾಗಿ ಹೋಗಿ ಉತ್ತಮ ಜೀವನ ಹೊಂದಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಲ್ಲಪ್ಪ ಬಡಿಗೇರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ,ಧಾರವಾಡ ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ವರೂರ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ನಿರ್ಮಲ ಬಿ.ಆರ್. ಉಪಸ್ಥಿತರಿದ್ದರು. ಕೇಂದ್ರ ಕಾರಾಗೃಹದ ಅಧೀಕ್ಷಕ ರಘಪತಿ ಸಿ.ಜೆ. ಅಧ್ಯಕ್ಷತೆ ವಹಿಸಿದ್ದರು. ಜನಪದ ಹಾಡುಗಾರ ರಾಮು ಮೂಲಗಿ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಕಾರಾಗೃಹದ ಶಿಕ್ಷಕ ಕುಮಾರ ಕುರಬೇಟ ನಿರೂಪಿಸಿದರು. ಬಳಿಕ ಧಾರವಾಡ ಕೇಂದ್ರ ಕಾರಾಗೃಹ ಬಂಧಿಗಳು `ತಲೆದಂಡ' ನಾಟಕ ಪ್ರದರ್ಶಿಸಿದರು.