ಝಕೀರ ನದಾಫ್ ಸುದ್ದಿಗೋಷ್ಠಿ 
ಧಾರವಾಡ

ರಂಗಭೂಮಿ ಪುನಶ್ಚೇತನಕ್ಕೆ ಆದ್ಯತೆ

ಜಗದೀಶ ಹೊಂಬಳಿ
ಧಾರವಾಡ: ವಿದ್ಯಾಕಾಶಿ ಧಾರವಾಡದ ಸಾಂಸ್ಕೃತಿಕ ರಾಯಭಾರಿ ಎಂದೇ ಹೆಸರಾದ 'ರಂಗಾಯಣ'ದ ಅಭಿವೃದ್ಧಿ ಹಾಗೂ ರಂಗಭೂಮಿಯ ಬೆಳವಣಿಗೆ ಮತ್ತು ರಂಗಭೂಮಿ ಪುನಶ್ಚೇತನಕ್ಕೆ ಹಲವು ‌ನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ನೂತನ ನಿರ್ದೇಶಕ ಝಕೀರ ನದಾಫ್ ತಿಳಿಸಿದರು.
ಗುರುವಾರ ರಂಗಾಯಣದಲ್ಲಿ ಸುದ್ದಿಗೋಷ್ಠಿ ಮಡೆಸಿದ ಅವರು, ರಂಗಾಯಣವನ್ನು ಕೇವಲ ಪ್ರದರ್ಶನಗಳಿಗೆ ಸೀಮಿತಗೊಳಿಸದೆ, ಯುವ ಸಮುದಾಯ ಮತ್ತು ಸಾರ್ವಜನಿಕರನ್ನು ಒಳಗೊಳ್ಳಲು ಹಲವು ಕಾರ್ಯಕ್ರಮ ರೂಪಿಸಿದೆ ಎಂದರು.
ಯುವ ಪ್ರತಿಭೆಗಳನ್ನು ರಂಗಭೂಮಿಯತ್ತ ಸೆಳೆಯಲು ಮತ್ತು ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಕಾಲೇಜು ಮಟ್ಟದಲ್ಲಿ 'ಅನಾವರಣ' ಎಂಬ ರಂಗೋತ್ಸವ ಆಯೋಜಿಸಿ, ವಿದ್ಯಾರ್ಥಿಗಳಲ್ಲಿನ ನಟನಾ ಕೌಶಲಕ್ಕೆ ಈ ಮೂಲಕ ಹೊಸ ದಿಕ್ಕು ನೀಡುವುದಾಗಿ ತಿಳಿಸಿದರು.
ರಂಗಧ್ವನಿ ಅನುಷ್ಠಾನ:
ರಂಗಭೂಮಿಯ ವೈವಿಧ್ಯತೆ ಮತ್ತು ಕಲಾವಿದರ ಧ್ವನಿಯನ್ನು ಜನಸಾಮಾನ್ಯರಿಗೆ ತಲುಪಿಸಲು ಈ ಹಿಂದಿನ ನಿರ್ದೇಶಕ ಡಾ. ಪ್ರಕಾಶ ಗರುಡ ಅವರ 'ರಂಗಧ್ವನಿ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಬಹುಭಾಷಾ ನಾಟಕೋತ್ಸವ:
ಧಾರವಾಡ ಅಂತಹ ಸಾಹಿತ್ಯಿಕ ಶ್ರೀಮಂತಿಕೆಯ ನೆಲದಲ್ಲಿ ವಿವಿಧ ಭಾಷೆಗಳ ಸಂಸ್ಕೃತಿಯನ್ನು ಪರಿಚಯಿಸಲು 'ಬಹುಭಾಷಾ ನಾಟಕೋತ್ಸವ'ವನ್ನು ಆಯೋಜಿಸುವ ಗುರಿ ಹೊಂದಲಾಗಿದೆ. ಇದರಿಂದ ನೆರೆ ರಾಜ್ಯಗಳ ಹಾಗೂ ವಿವಿಧ ಭಾಷೆಗಳ ರಂಗಪ್ರಯೋಗಗಳನ್ನು ಇಲ್ಲಿನ ಪ್ರೇಕ್ಷಕರು ಸವಿಯಲು ಸಾಧ್ಯವಾಗಲಿದೆ ಎಂದರು.
ರಂಗಾಯಣದ ಆವರಣದಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆ, ಹಳೆಯ ನಾಟಕಗಳ ಮರುಪ್ರದರ್ಶನದ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಜೊತೆಗೆ, ರಂಗ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಅನುದಾನಕ್ಕೆ ಪ್ರಯತ್ನ!
ಮೈಸೂರು ಮಾದರಿ ಧಾರವಾಡ ರಂಗಾಯಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಒತ್ತು ನೀಡಿದ್ದು, ಸರ್ಕಾರದಿಂದ ಶಾಸ್ವತ ಅನುದಾನ ತರುವಲ್ಲಿ ಈ ಭಾಗದ ಶಾಸಕರು, ಸಚಿವರು, ಸಾಹಿತ್ಯ ವಲಯ, ರಂಗಕರ್ಮಿಗಳು ಜತೆ ಚರ್ಚಿಸಿ, ನಿಯೋಗ ಹೋಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು‌ ನಿರ್ದೇಶಕ ಝಕೀರ್ ನದಾಫ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದರ ಇದ್ದರು.
"

ರಂಗಾಯಣವು ಕೇವಲ ಒಂದು ಸಂಸ್ಥೆಯಲ್ಲ, ಅದು ಕಲೆ ಮತ್ತು ಬದುಕನ್ನು ಜೋಡಿಸುವ ಕೊಂಡಿ. ಯುವಜನತೆಗೆ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಿ, ಈ ಪರಂಪರೆ ಮುಂದುವರೆಸುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳಿಗೆ ಆದ್ಯತೆ ನೀಡುತ್ತಿದ್ದೇವೆ.

— ಝಕೀರ ನದಾಫ್, ರಂಗಾಯಣ ನಿರ್ದೇಶಕ