Baby 
ಧಾರವಾಡ

ಅವಧಿ ಪೂರ್ವ 180 ಶಿಶುಜನನ!

ಜಗದೀಶ ಹೊಂಬಳಿ

ಪ್ರಮುಖ ಮುಖ್ಯಾಂಶಗಳು

  • ಅವಧಿ ಪೂರ್ವ 180 ಶಿಶುಜನನ
  • ರಾಷ್ಟ್ರೀಯ ನವಜಾತ ಶಿಶು ಆರೈಕೆ ವಾರ ವೇಳೆ ಬಹಿರಂಗ
  • ವೈದ್ಯರಿಂದ ಜಾಗೃತಿ
ಧಾರವಾಡ: ಕಳೆದ ಒಂದು ವರ್ಷದಲ್ಲಿ ಅವಧಿ ಪೂರ್ವ ಜನಿಸಿದ ಸುಮಾರು 180 ಶಿಶುಗಳು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆದಿವೆ.
ಅಕ್ಟೋಬರ್ ತಿಂಗಳವೊಂದರಲ್ಲಿ ಅವಧಿ ಪೂರ್ವ ಜನಿಸಿದ 17 ಶಿಶುಗಳು ಚಿಕಿತ್ಸೆ ಪಡೆದಿವೆ ಇದರಲ್ಲಿ ಜಿಲ್ಲಾಸ್ಪತ್ರೆಯಲ್ಲಿ 8, ಪ್ರಾಥಮಿಕ ಆರೋಗ್ಯ ಕೇಂದ್ರ, ಬೇರೆ ಬೇರೆ ಕಡೆಗಳಲ್ಲಿ 9 ಶಿಶುಗಳ ಜನನವಾಗಿವೆ. ಈ ಪೈಕಿ 23 ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ರವಾನಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2 ಶಿಶುಗಳು ಮರಣ ಹೊಂದಿವೆ. ಇದೇ ತಿಂಗಳು ನವೆಂಬರ್ 23ರವರೆಗೆ ಅವಧಿ ಪೂರ್ವ 13 ಶಿಶುಗಳು ಜನಿಸಿವೆ. ಈ ಪೈಕಿ ಜಿಲ್ಲಾಸ್ಪತ್ರೆಯಲ್ಲಿ 7, ವಿವಿಧಡೆಯಲ್ಲಿ 6 ಶಿಶುಗಳು ಜನಿಸಿವೆ. ಇದರಲ್ಲಿ 2 ಶಿಶುಗಳನ್ನು ಹೆಚ್ಚಿನ ಅರೈಕೆಗಾಗಿ ಕಿಮ್ಸ್ಗೆ ರವಾನಿಸಲಾಗಿದೆ.
ವೈದ್ಯರಿಂದ ಜಾಗೃತಿ: ಗರ್ಭಿಣಿ ಇರುವಾಗ ರಕ್ತದ ಒತ್ತಡ ಮತ್ತು ಸಕ್ಕರೆ ಪ್ರಮಾಣದಲ್ಲಿ ಏರಿಳಿತ, ಮೂತ್ರನಾಳದಲ್ಲಿ ಸೋಂಕು, ರಕ್ತಸ್ರಾವ ಮುಂತಾದ ಕಾರಣಗಳಿಂದಾಗಿ ಅವಧಿಪೂರ್ವ ಹೆರಿಗೆಗಳು ಸಂಭವಿಸುತ್ತವೆ. ಪರಿಣಾಮವಾಗಿ ಮಗುವಿನ ತೂಕ ಕಡಿಮೆ. ಇರುತ್ತದೆ. ಇನ್ನೂ ಹಲವು ಸಮಸ್ಯೆಗಳನ್ನೂ ಶಿಶುಗಳು ಎದುರಿಸುತ್ತಿರುತ್ತವೆ. ಇಂತಹ ಮಕ್ಕಳ ಆರೈಕೆ ಅತ್ಯಂತ ಸವಾಲಿನದಾಗಿದ್ದು, ಆರೈಕೆ ಬಗ್ಗೆ ದಾದಿಯರು ಮತ್ತು ತಾಯಂದಿರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ.
ವೈದ್ಯರು ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಪ್ಪ ಗಾಬಿ ಹೇಳುತ್ತಾರೆ. ಅವಧಿಪೂರ್ವ ಜನನ, ಇತರ ತೊಂದರೆಗಳನ್ನು ಎದುರಿಸುತ್ತಿರುವ ಶಿಶುಗಳಿಗೆ ಹಾಲುಣಿಸುವ ವಿಧಾನ, ಸ್ನಾನ ಮಾಡಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ತಾಯಂದಿರಿಗೆ ತಿಳಿವಳಿಕೆ ನೀಡುವುದು, ಶಿಶುಗಳ ಕಣ್ಣು, ಕಿವಿ ತಪಾಸಣೆ ನಡೆಸಿ, ನ್ಯೂನತೆ ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಲಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಕುಟುಂಬ, ಸಮುದಾಯದ ಸಹಕಾರ ಅಗತ್ಯ:
ಐಸಿಯುನಲ್ಲಿರುವ ನವಜಾತ ಶಿಶುವನ್ನು ನಿತ್ಯವೂ ಆರು ಗಂಟೆಗಳ ಕಾಲ ತಾಯಿಯ ಮಡಿಲಿನಲ್ಲಿ ಇರಿಸಲಾಗುತ್ತದೆ. ಇದಕ್ಕೆ ಕಾಂಗರೂ ಮದರ್ ಕೇರ್ ಎಂದು ಕರೆಯುತ್ತಾರೆ. ಇದು ಶಿಶುಗಳ ಬೆಳವಣಿಗೆಗೆ ಅತ್ಯಂತ ಪೂರಕ. ನವಜಾತ ಶಿಶುವಿನ ಪ್ರತಿ ಸ್ಪರ್ಶ, ಪ್ರತಿ ಬಾರಿಯೂ ಸುರಕ್ಷಿತವಾಗಿರಲಿ ಎಂಬುದು ಪ್ರಸಕ್ತ ವರ್ಷದ 'ರಾಷ್ಟ್ರೀಯ ನವಜಾತ ಶಿಶು ಆರೈಕೆ ವಾರ'ದ ಧೈಯ ವಾಕ್ಯವಾಗಿತ್ತು. ಶಿಶುಗಳ ಸುರಕ್ಷತೆಗೆ ಗಮನ ವಹಿಸುವುದರಲ್ಲಿ ಕುಟುಂಬ, ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ.
"

ದೇಶದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಶೇ.20 ರಷ್ಟಿದೆ. ಈ ಪ್ರಮಾಣ ತಗ್ಗಿಸಲು ಪ್ರತಿ ನವೆಂಬರ್ 15ರಿಂದ 21ರವರೆಗೆ ರಾಷ್ಟ್ರೀಯ ನವಜಾತ ಶಿಶು ಆರೈಕೆ ವಾರವನ್ನಾಗಿ ಆಚರಿಸಲಾಗಿದ್ದು, ಈ ವೇಳೆ ಅವಧಿಪೂರ್ವ ಜನನ, ಕಡಿಮೆ ತೂಕ, ಉಸಿರಾಟದ ತೊಂದರೆ, ರಕ್ತದ ಒತ್ತಡ, ಸಕ್ಕರೆ ಪ್ರಮಾಣ ಹೆಚ್ಚು ಅಥವಾ ಕಡಿಮೆ ಆಗಿರುವುದು, ಹಾಲು ಜೀರ್ಣವಾಗದಿರುವುದು, ಸೋಂಕು ಇತ್ಯಾದಿ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗುವ ನವಜಾತ ಶಿಶುಗಳ ತಾಯಂದಿರಿಗೆ ಜಾಗೃತಿ ಮೂಡಿಸಲಾಗಿದೆ.