ಹುಬ್ಬಳ್ಳಿಯಲ್ಲಿ ಸೋಮವಾರ 2024-25ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 12 ಆಸ್ಪತ್ರೆಗಳಿಗೆ ಇಸಿಜಿ ಯಂತ್ರಗಳನ್ನು prasada abbayya ಶಾಸಕ ಪ್ರಸಾದ ಅಬ್ಬಯ್ಯ ವಿತರಿಸಿದರು.
ಹುಬ್ಬಳ್ಳಿ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ರಾಷ್ಟ್ರೀಕರಣವಾಗಬೇಕು. ಈ ಮೂಲಕ ಬಡವರಿಗೆ ಉಚಿತವಾಗಿ ಸೇವೆ ದೊರೆಯಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ prasada abbayya ಆಗ್ರಹಿಸಿದರು.
ಇಲ್ಲಿಯ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 12 ಆಸ್ಪತ್ರೆಗಳಿಗೆ ಇಸಿಜಿ ಯಂತ್ರ ವಿತರಣೆ ಮತ್ತು ಹೃದಯ ರೋಗದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಬಡವರ ಪರ ಕಾಳಜಿ ಇಟ್ಟುಕೊಂಡು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಇನ್ನೂ 5 ನಮ್ಮ ಕ್ಲಿನಿಕ್ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಹಳೇ ಹುಬ್ಬಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿರುವ ಆಸ್ಪತ್ರೆಯನ್ನು ಶೀಘ್ರವೇ ಉದ್ಘಾಟಿಸಲಾಗುವುದು ಎಂದರು.
ಹೃದ್ರೋಗ ತಜ್ಞ ಡಾ. ಅಮಿತ್ ಸತ್ತೂರ ಮಾತನಾಡಿ, ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆ ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿದೆ. ಪ್ರತಿ 33 ಸೆಕೆಂಡಿಗೆ ಒಬ್ಬರಿಗೆ ಹೃದಯಾಘಾತವಾಗುತ್ತಿದೆ. ಇದು ಆತಂಕದ ವಿಷಯ. ಇದಕ್ಕೆ ತಂಬಾಕು ಸೇವನೆ, ಮಧುಮೇಹ, ರಕ್ತದೊತ್ತಡ, ಕುಟುಂಬ ಇತಿಹಾಸವೂ ಕಾರಣವಾಗಬಲ್ಲದು. ಈ ನಿಟ್ಟಿನಲ್ಲಿ ಎದೆ ಉರಿ, ನೋವು, ಭಾರ, ಬೆನ್ನು ನೋವು, ವಾಕರಿಗೆ ಸೇರಿ ಇತರ ಲಕ್ಷಣಗಳು ಕಂಡುಬಂದರೆ, ಕೂಡಲೇ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿವಳಿಕೆ ಮೂಡಿಸಿದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಮಾತನಾಡಿ, ಇಸಿಜಿ ಮಾಡಿಸಿಕೊಳ್ಳುವುದು ಈಗೀಗ ದುಬಾರಿ. ಹಾಗಾಗಿಯೇ ಶಾಸಕ ಪ್ರಸಾದ ಅಬ್ಬಯ್ಯ ಅವರು ಸರ್ಕಾರಿ ಆಸ್ಪತ್ರೆಗಳಿಗೆ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. ಉಚಿತವಾಗಿಯೇ ಸಾರ್ವಜನಿಕರು ತಪಾಸಣೆ ಮಾಡಿಸಿಕೊಳ್ಳಬಹುದು ಎಂದರು.
ಡಿಎಚ್‌ಒ ಡಾ. ಪರಶುರಾಮ, ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ಮಾತನಾಡಿದರು.
ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ ಛತ್ರಿ ಮತ್ತು ರೇನ್ ಕೋಟ್‌ಗಳನ್ನು ಶಾಸಕರು ವಿತರಿಸಿದರು.
ಟಿಎಚ್‌ಒ ಡಾ. ಹುಲಗಣ್ಣ ಇಂಜಗನರಿ, ಡಾ. ಭಾರತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಓಂಕಾರಗೌಡ್ರ, ಇತರರಿದ್ದರು.