prasad abbayya ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಸಾದ ಅಬ್ಬಯ್ಯ ಅಭಿಮಾನಿಗಳು, ಹುಬ್ಬಳ್ಳಿಯಲ್ಲಿ ಸೋಮವಾರ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ prasad abbayya ಅವರಿಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡದಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಸಾದ ಅಬ್ಬಯ್ಯ ಅಭಿಮಾನಿಗಳು, ನಗರದ ಇಂಡಿಪಂಪ್ ವೃತ್ತದಲ್ಲಿ ಸೋಮವಾರ ಸಂಚಾರ ತಡೆ ನಡೆಸಿದರು. ಬಸ್‌ಗೆ ಕಲ್ಲು ಎಸೆದು, ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಇದೇ ವೇಳೆ ಪೊಲೀಸರು, 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ಭಾಗದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಎಸ್‌ಸಿ ಸಮುದಾಯದ ನಾಯಕರಾಗಿರುವ ಅಬ್ಬಯ್ಯ ಅವರು, ಎಲ್ಲ ಸಮುದಾಯದವರನ್ನೂ ಒಗ್ಗೂಡಿಸಿಕೊಂಡು ಹೊರಟಿದ್ದಾರೆ. ಇಂಥ ನಾಯಕರಿಗೆ ಸಚಿವ ಸ್ಥಾನ ನೀಡದೇ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೈಯರ್‌ಗೆ ಬೆಂಕಿ ಹಚ್ಚಿದ್ದ ವೇಳೆ ನಂದಿಸಲು ಹೋದ ಪೊಲೀಸರನ್ನೇ ತಳ್ಳಿ, ಪ್ರತಿಭಟನಾಕಾರರು ತಮ್ಮ ಮೇಲೆ ನೀರು ಸುರಿದುಕೊಂಡರು. ಇದರಿಂದ ಕೆಲ ಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಎಸಿಪಿಗಳಾದ ಉಮೇಶ ಚಿಕ್ಕಮಠ, ವೀರೇಶ ಅವರ ನೇತೃತ್ವದ ತಂಡವು, ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿ ಸಫಲವಾಯಿತು. ಗುಂಪು ಚದುರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು.
ಪ್ರಮುಖರಾದ ಪ್ರಕಾಶ ಬುರಬುರೆ, ಅಲ್ತಾಫ್ ಕಿತ್ತೂರ, ಬಷೀರ್ ಗುಡಮಾಲ, ಶ್ರೀನಿವಾಸ ಬೆಳದಡಿ, ಮುಸ್ತಾಕ ಮುದಗಲ್ಲ, ವಿಜನಗೌಡ ಪಾಟೀಲ, ರಾಜಕುಮಾರ ಕಾಮರಡ್ಡಿ, ಹಜರತ್ ಮುನ್ಷಿ, ನಾಷೀರ ಅಸುಂಡಿ, ಇತರರು ಪ್ರತಿಭಟನೆಯಲ್ಲಿದ್ದರು.